Publish Date: Fri, 23 Jul 2021 (19:19 IST)
Updated Date: Fri, 23 Jul 2021 (19:24 IST)
ಬೆಂಗಳೂರು: ಬಿಜೆಪಿ ರಾಜ್ಯ ರೈತ ಮೋರ್ಚಾ ಕಾರ್ಯಕಾರಿಣಿ ಸಭೆಯು ಜುಲೈ 25ರಂದು ಭಾನುವಾರ ಮೈಸೂರಿನ “ಗೋವಿಂದರಾವ್ ಮೆಮೊರಿಯಲ್ ಹಾಲ್”ನಲ್ಲಿ ನಡೆಯಲಿದ್ದು, ಆ ದಿನ ಬೆಳಿಗ್ಗೆ 10.30ಕ್ಕೆ ರಾಜ್ಯದ ಸಹಕಾರ ಸಚಿವರಾದ ಎಸ್.ಟಿ. ಸೋಮಶೇಖರ್ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಲಿದ್ದಾರೆ ಎಂದು ಭಾರತೀಯ ಜನತಾ ಪಕ್ಷ ತನ್ನ ರೈತ ಮೋರ್ಚಾ ರಾಜ್ಯ ಅಧ್ಯಕ್ಷ ಈರಣ್ಣ ಕಡಾಡಿ ಪ್ರಕಟಣೆಯಲ್ಲಿ ಮೂಲಕ ತಿಳಿಸಿದ್ದಾರೆ.
ರಾಜ್ಯಸಭಾ ಸದಸ್ಯರು ಮತ್ತು ರೈತ ಮೋರ್ಚಾ ರಾಜ್ಯ ಅಧ್ಯಕ್ಷರಾದ ಈರಣ್ಣ ಕಡಾಡಿ ಅಧ್ಯಕ್ಷತೆಯಲ್ಲಿ ಈ ಸಭೆ ನಡೆಯಲಿದೆ. ಮೈಸೂರು ಲೋಕಸಭಾ ಸದಸ್ಯರಾದ ಪ್ರತಾಪಸಿಂಹ ಮತ್ತಿತರ ಬಿಜೆಪಿ ಮುಖಂಡರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎನ್ನುವ ಮಾಹಿತಿ ಪಕ್ಷದ ವತಿಯಿಂದ ದೊರೆತಿದೆ.
ರೈತ ಮೋರ್ಚಾ ರಾಜ್ಯ ಕಾರ್ಯಕಾರಿಣಿಯಲ್ಲಿ “ಪಕ್ಷ ಸಂಘಟನೆಯಲ್ಲಿ ರೈತ ಮೋರ್ಚಾದ ಪಾತ್ರ”, “ದೇಶದ ಆರ್ಥಿಕತೆಯಲ್ಲಿ ಕೃಷಿಯ ಪಾತ್ರ”, “ಮುಂದಿನ ಕಾರ್ಯ ಯೋಜನೆ” ಹಾಗೂ “ಕೃಷಿ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಅಭಿನಂದನೆಗಳು” ಎನ್ನುವ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ. ಈ ಸಭೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ರೈತ ಮುಖಂಡರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ