Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನೆಹರೂ ಕುಟುಂಬ ಹೊರತುಪಡಿಸಿದ ಭಾರತವನ್ನು ಊಹಿಸಲೂ ಕಷ್ಟ: ಡಿಕೆ ಶಿವಕುಮಾರ್

ನೆಹರೂ ಕುಟುಂಬ ಹೊರತುಪಡಿಸಿದ ಭಾರತವನ್ನು ಊಹಿಸಲೂ ಕಷ್ಟ: ಡಿಕೆ ಶಿವಕುಮಾರ್

sampriya

ಬೆಂಗಳೂರು , ಗುರುವಾರ, 31 ಅಕ್ಟೋಬರ್ 2024 (15:00 IST)
photo credit X
ಬೆಂಗಳೂರು: ನೆಹರು ಅವರ ಕುಟುಂಬವನ್ನು ಹೊರತು ಪಡಿಸಿ ಭಾರತವನ್ನು ಊಹಿಸಿಕೊಳ್ಳಲು ಸಹ ಸಾಧ್ಯವಿಲ್ಲ. ಈ ದೇಶದ ಐಕ್ಯತೆ, ಸಮಗ್ರತೆಗೆ ಪ್ರಾಣ ಕೊಟ್ಟವರು ಇಂದಿರಾಗಾಂಧಿ. ಅವರು ಆಗಾಗ್ಗೆ ಹೇಳುತ್ತಿದ್ದ ಮಾತು "ನಾನು ಯಾರಿಂದಲೂ ಅಥವಾ ಯಾವುದೇ ರಾಷ್ಟ್ರದ ಒತ್ತಡಕ್ಕೆ ಒಳಗಾಗುವ ವ್ಯಕ್ತಿಯಲ್ಲ" ಎನ್ನುತ್ತಿದ್ದರು ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಇಂದಿರಾಗಾಂಧಿ ಅವರ ಪುಣ್ಯ ಸ್ಮರಣೆ ಹಾಗೂ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಜನ್ಮದಿನದ ಅಂಗವಾಗಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತ್ ಜೋಡೋ ಯಾತ್ರೆ ವೇಳೆ ಮೊಣಕಾಲ್ಮುರಿನ ಬಳಿ 70 ವರ್ಷದ ಅಜ್ಜಿಯೊಬ್ಬರು ರಾಹುಲ್ ಗಾಂಧಿ ಅವರಿಗೆ ಸೌತೆಕಾಯಿ ನೀಡಲು ಬಂದರು. ಆಗ ನನ್ನ ಬಳಿ ಅವರ ಅಜ್ಜಿ ಇಂದಿರಮ್ಮ ಕೊಟ್ಟ ಭೂಮಿಯಲ್ಲಿ ಬೆಳೆದಿದ್ದು, ಎಂದು ಕಣ್ಣೀರು ಹಾಕಿದ್ದರು. ಇತ್ತೀಚಿಗೆ ಅವರು ತೀರಿ ಹೋಗಿದ್ದಾರೆ. ಅದೇ ಜಾಗದಲ್ಲಿ ಭಾರತ್ ಜೋಡೋ ಟ್ರೈನಿಂಗ್ ಸೆಂಟರ್ ಅನ್ನು ತೆರೆಯಬೇಕು ಎನ್ನುವ ಆಲೋಚನೆಯಿದೆ.

ಪಿಂಚಣಿ, ಮನೆ, ಭೂಮಿ, ಪಡಿತರ ಸೇರಿದಂತೆ ಇಡೀ ದೇಶದ ಬಡ ಜನರ ಅಭಿವೃದ್ಧಿಗೆ ಯಾವ, ಯಾವ ಕಲ್ಯಾಣ ಕಾರ್ಯಕ್ರಮಗಳು ಇವೆಯೋ ಅದೆಲ್ಲವನ್ನು ಜಾರಿಗೆ ತಂದಿದ್ದು  ಇಂದಿರಾಗಾಂಧಿ ಅವರು. ಬಡತನ ನಿರ್ಮೂಲನೆಗೆ ಕಾರ್ಯಕ್ರಮ ರೂಪಿಸಿದರು. ನೆಹರು ಅವರು ಹಾಕಿಕೊಟ್ಟ ಅಭಿವೃದ್ಧಿಯ ಮಾರ್ಗದಲ್ಲಿ ನಡೆದರು.

ಇಂದಿರಾಗಾಂಧಿ ಅವರ ನುಡಿಮುತ್ತುಗಳನ್ನು ಸೋನಿಯಾಗಾಂಧಿ ಅವರು ಪುಸ್ತಕ ರೂಪದಲ್ಲಿ ಸಂಗ್ರಹ ಮಾಡಿದ್ದಾರೆ. ಈ ಪುಸ್ತಕವನ್ನು ಶೀಘ್ರದಲ್ಲಿಯೇ ಹೊರಗೆ ತರಲಾಗುವುದು. ಇದರಲ್ಲಿನ ಒಂದು ವಾಕ್ಯ ಹೀಗಿದೆ. "ಸಮಸ್ಯೆಗಳು ನಮ್ಮ ಮನೆ ಬಾಗಿಲಿಗೆ ಬಂದು ಕುಳಿತಿವೆ. ಈ ಸಮಸ್ಯೆಗಳ ನಿವಾರಣೆಗೆ ಪರ್ವತವನ್ನು ಹತ್ತಬೇಕಾಗಿಲ್ಲ. ಸಾಗರಗಳನ್ನು ದಾಟ ಬೇಕಾಗಿಲ್ಲ. ನಮ್ಮ ಪ್ರತಿ ಹಳ್ಳಿಗಳಲ್ಲಿ ಬಡತನವಿದೆ. ಮನೆಗಳಲ್ಲಿ ಜಾತಿಯಿದೆ. ಇವೆರಡನ್ನು ನಾವು ಪರ್ವತ ಹಾಗೂ ಸಾಗರದ ಆಚೆಗೆ ದಾಟಿಸಬೇಕು" ಎಂದು ಅದ್ಬುತವಾದ ಸಂದೇಶ ನೀಡಿದ್ದಾರೆ.
ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಈ ದೇಶದ ಸಮಗ್ರತೆಗೆ ಕೊಡುಗೆ ನೀಡಿದವರು ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು. ಹರಿದು ಹಂಚಿ ಹೋಗಿದ್ದ ದೇಶವನ್ನು ಒಗ್ಗೂಡಿಸಿದರು. ಆದರೆ ಪಟೇಲರ ಹೆಸರನ್ನು ಈಗ ಬೇರೆಯವರು ಬಳಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ಎಂದಿಗೂ ಇತಿಹಾಸ ಬದಲಾವಣೆ ಸಾಧ್ಯವಿಲ್ಲ.
ಕ್ವೀನ್ಸ್ ರಸ್ತೆಯ ಕಾಂಗ್ರೆಸ್ ಕಚೇರಿ ಹಿಂಭಾಗದ ನೂತನ ಕಟ್ಟಡವನ್ನು ರಾಹುಲ್ ಗಾಂಧಿ ಅವರು ಉದ್ಘಾಟನೆ ಮಾಡಿದರು. ಆಗ ಯಾವ ಹೆಸರು ಇಡಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೇಳಿದೆ. ಆಗ ಅವರು ಇಂದಿರಾಗಾಂಧಿ ಭವನ ಎಂದು ಹೆಸರಿಡಲು ಸೂಚನೆ ನೀಡಿದರು.
 

 

Share this Story:

Follow Webdunia kannada

ಮುಂದಿನ ಸುದ್ದಿ

ಅರುಣ್‌ ಯೋಗಿರಾಜ್‌ ಸೇರಿ 69 ಸಾಧಕರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ