Publish Date: Thu, 12 Oct 2023 (16:41 IST)
Updated Date: Thu, 12 Oct 2023 (16:44 IST)
ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಮೂಲಕ ಭಾರಿ ಸದ್ದು ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ, ನಾಲ್ಕು ತಿಂಗಳಲ್ಲಿ 4 ಗ್ಯಾರಂಟಿಗಳಿಗೆ ಬರೋಬ್ಬರಿ 6,392 ಕೋಟಿ ರೂ. ವೆಚ್ಚ ವ್ಯಯಿಸಿದೆ.. ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿಗಳು ಹಂತ ಹಂತವಾಗಿ ಜಾರಿಯಾಗಿದ್ದು, ಕೊನೆಯದಾಗಿ ಜಾರಿಯಾದ ಗೃಹಲಕ್ಷ್ಮೀಗೆ ಕೇವಲ ಒಂದೂವರೆ ತಿಂಗಳಲ್ಲಿ 1,935 ಕೋಟಿ ರೂ. ವೆಚ್ಚವಾಗಿರುವುದು ಗಮನಾರ್ಹ. ಐದು ಗ್ಯಾರಂಟಿಗಳಿಗೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ 39,815 ಕೋಟಿ ರೂ. ವೆಚ್ಚದ ಅಂದಾಜು ಇದ್ದು, ಯುವನಿಧಿ ಹೊರತುಪಡಿಸಿದರೆ ಉಳಿದ ಗ್ಯಾರಂಟಿಗಳ ವೆಚ್ಚದ ಬಾಬ್ತು ಈಗಾಗಲೇ ಶುರುವಾಗಿದೆ. ವಾರ್ಷಿಕ ಅಂದಾಜಿನಲ್ಲಿ ನಾಲ್ಕು ತಿಂಗಳಲ್ಲಿ ಶೇ.16ರಷ್ಟು ಅನುದಾನ ವೆಚ್ಚವಾಗಿದ್ದು, ಆರಂಭಿಕ ನಾಲ್ಕು ತಿಂಗಳಲ್ಲಿ ಇಷ್ಟು ದೊಡ್ಡ ಮೊತ್ತದ ಹಣ ವೆಚ್ಚವಾಗಿರುವುದು ಇದೇ ಮೊದಲು ಎನ್ನಲಾಗಿದೆ