ಇಂಧನ ಸಚಿವ ಕೆಜೆ ಜಾರ್ಜ್ ಅವರು ಕೇಂದ್ರ ಸರ್ಕಾರದ ವಿದ್ಯುತ್, ನವ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಆರ್.ಕೆ.ಸಿಂಗ್ ಅವರನ್ನು ಕರ್ನಾಟಕದ ಇಂಧನ ಪರಿಸ್ಥಿತಿಯ ಕುರಿತು ಮನವರಿಕೆ ಮಾಡಿಕೊಡಲು ಬುಧವಾರ ಸಂಜೆ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಕೆ ಜೆ ಜಾರ್ಜ್ ಅವರು ವಿದ್ಯುತ್ ಬೇಡಿಕೆಯ ಹೆಚ್ಚಳದ ದೃಷ್ಟಿಯಿಂದ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸಲು ತೆಗೆದುಕೊಂಡ ಕ್ರಮಗಳ ಬಗ್ಗೆ ವಿವರಿಸಿದರು. ಈ ವೇಳೆ ಕೇಂದ್ರೀಯ ಉತ್ಪಾದನಾ ಕೇಂದ್ರಗಳಲ್ಲಿ ಹೆಚ್ಚಿನ ಪಾಲು ನೀಡುವ ಮೂಲಕ ಕರ್ನಾಟಕದ ಹೆಚ್ಚುವರಿ ವಿದ್ಯುತ್ ಅಗತ್ಯವನ್ನು ಪೂರೈಸಲು ಬೆಂಬಲಿಸಬೇಕೆಂದು ವಿನಂತಿಸಿದರು. ಕೆಜೆ ಜಾರ್ಜ್ ಅವರು ಕರ್ನಾಟಕ ಇಂಧನ ಸಚಿವಾಲಯದ ವಿವಿಧ ನವೀನ ಯೋಜನೆಗಳ ವಿವರಗಳನ್ನು ಹಂಚಿಕೊಳ್ಳುತ್ತಾ ರಾಜ್ಯವು ವಾಯು ಮತ್ತು ಸೌರ ಶಕ್ತಿಯ ಮೂಲಗಳಿಂದ ಶಕ್ತಿ ಉತ್ಪಾದನೆಗೆ ಹೆಚ್ಚು ಒತ್ತು ನೀಡುತ್ತಿದೆ. ಆ ಮೂಲಕ ನವೀಕರಿಸಲಾಗದ ಇಂಧನ ಉತ್ಪಾದನೆಯ ಮೂಲಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತಿರುವ ಬಗ್ಗೆ ತಿಳಿಸಿ ಈ ಮೂಲಕ ಶುದ್ಧ ಮತ್ತು ಸಮರ್ಥ ನವೀಕರಿಸಬಹುದಾದ ಇಂಧನ ಮೂಲಗಳತ್ತ ಸಾಗುತ್ತಿರುವ ಬಗ್ಗೆ ವಿವರಿಸಿದರು.