ಬೆಂಗಳೂರು: ಬಿಪಿಎಲ್ ಕಾರ್ಡ್ ದಾರರಿಗೆ ಕರ್ನಾಟಕ ಕಾಂಗ್ರೆಸ್ ಸರ್ಕಾರ ಅನ್ನಭಾಗ್ಯ ಯೋಜನೆ ನೀಡುತ್ತಿದೆ. ಇದೀಗ ಬಿಪಿಎಲ್ ಕಾರ್ಡ್ ದಾರರಿಗೆ ಮುಂದಿನ ವಾರದಿಂದ ಸಿಹಿ ಸುದ್ದಿಯೊಂದು ಸಿಗಲಿದೆ.
ಅನ್ನ ಭಾಗ್ಯ ಯೋಜನೆಯಡಿ 5 ಕೆ.ಜಿ. ಅಕ್ಕಿ ಮತ್ತು ಉಳಿದ 5 ಕೆಜಿ ಅಕ್ಕಿ ಬಾಬ್ತು ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಜಮೆ ಮಾಡುವುದಾಗಿ ಸರ್ಕಾರ ಘೋಷಿಸಿತ್ತು. ಆದರೆ ಕಳೆದ ಕೆಲವು ತಿಂಗಳಿನಿಂದ ಹಣ ಬರುತ್ತಿಲ್ಲ ಎಂಬ ಆರೋಪಗಳೂ ಕೇಳಿಬರುತ್ತಿವೆ. ಇದರ ಬಗ್ಗೆ ಈಗ ಆಹಾರ ಸಚಿವ ಕೆಎಚ್ ಮುನಿಯಪ್ಪ ಗುಡ್ ನ್ಯೂಸ್ ನೀಡಿದ್ದಾರೆ.
ಕಳೆದ ಕೆಲವು ತಿಂಗಳಿನಿಂದ ಹಣ ಜಮೆ ಆಗಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸರ್ವರ್ ಸಮಸ್ಯೆ ಕಾರಣದಿಂದ ಹಣ ಜಮೆ ಆಗಿರಲಿಲ್ಲ. ಹೀಗಾಗಿ ಸ್ವಲ್ಪ ಸಮಸ್ಯೆಯಾಗಿತ್ತು. ಆದರೆ ಮುಂದಿನ ವಾರದಿಂದ ಫಲಾನುಭವಿಗಳ ಖಾತೆಗೆ ಇದುವರೆಗೆ ಬಾರದೇ ಇರುವ ಕಂತುಗಳೂ ಸೇರಿದಂತೆ ಎಲ್ಲಾ ಕಂತಿನ ಹಣ ಜಮೆ ಆಗಲಿದೆ ಎಂದು ಮುನಿಯಪ್ಪ ಹೇಳಿದ್ದಾರೆ.
ಪ್ರತೀ ತಿಂಗಳು 10 ರಂದು ಹಣ ಬಿಡುಗಡೆಯಾಗುತ್ತಿತ್ತು. ಆದರೆ ಸರ್ವರ್ ಸಮಸ್ಯೆಯಿಂದ ಹಣ ಬಿಡುಗಡೆ ವಿಳಂಬವಾಗಿದೆ. ಜೊತೆಗೆ ಬಿಪಿಎಲ್ ಕಾರ್ಡ್ ಗೆ ಅರ್ಹರಾದವರನ್ನು ಗುರುತಿಸುವ ಕೆಲಸವಾಗುತ್ತಿದೆ. ಮುಂದಿನ ವಾರದಿಂದ ಬಿಪಿಎಲ್ ಅರ್ಹತೆ ಪರಿಶೀಲಿಸಿ ಅರ್ಹರಿಗೆ ಹಣ ಜಮೆ ಆಗಲಿದೆ ಎಂದಿದ್ದಾರೆ. ಫಲಾನುಭವಿಗಳ ಖಾತೆಗೆ ಪ್ರತಿ ಕೆಜಿ ಅಕ್ಕಿಗೆ 34 ರೂ.ನಂತೆ ತಿಂಗಳಿಗೆ 5 ಕೆಜಿ ಅಕ್ಕಿ ಬಾಬ್ತು 170 ರೂ. ಹಣ ಜಮೆ ಆಗಬೇಕಿದೆ.