ಹುಬ್ಬಳ್ಳಿ: ಹಣಕಾಸಿನ ವ್ಯವಹಾರ ಮತ್ತು ಹಳೇ ದ್ವೇಷದ ಹಿನ್ನೆಲೆ ಎಂಟು ಮಂದಿಯ ಗುಂಪೊಂದು ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿರುವ ಘಟನೆ ಗೋಪನಕೊಪ್ಪದ ವೃತ್ತದಲ್ಲಿ ನಡೆದಿದೆ. ಹತ್ಯೆಯಾದ ವ್ಯಕ್ತಿಯನ್ನು ಗೋಪನಕೊಪ್ಪದ ಶಿವರಾಜ(23) ಎಂದು ಗುರುತಿಸಲಾಗಿದೆ.
ಮಚ್ಚಿನಿಂದ ಐದು ಬಾರಿ ತಲೆ ಭಾಗಕ್ಕೆ ಹಾಗೂ 30ಕ್ಕೂ ಹೆಚ್ಚು ಕಡೆ ಚಾಕುವಿನಿಂದ ಇರಿದ ಗುರುತು ಮೃತ ದೇಹದ ಮೇಲೆ ಪತ್ತೆಯಾಗಿದೆ. ಕಿಮ್ಸ್ ಶವಾಗಾರದ ಎದುರು ಶಿವರಾಜ ಅವರ ಸಂಬಂಧಿಗಳ ಆಕ್ರಂದನ ಮುಗಿಲು ಮುಗಿಲುಮುಟ್ಟಿದ್ದು, ಕೊಲೆಗಡುಗರಿಕೆ ಗಲ್ಲು ಶಿಕ್ಷೆ ನೀಡಿ ಎಂದು ಆಗ್ರಹಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ಕಿರಣ ಜಟ್ಟನಪ್ಪನವರ ಮತ್ತು ಸುದೀಪ ರಾಯಾಪುರ ಅವರನ್ನು ಅಶೋಕನಗರ ಠಾಣೆ ಪೊಲೀಸರು ಶುಕ್ರವಾರ ರಾತ್ರಿಯೇ ಬಂಧಿಸಿದ್ದರು.
ಈ ಸಂಬಂಧ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಪ್ರತಿಕ್ರಿಯಿಸಿ, ಮೂವರು ಆರೋಪಿಗಳಲ್ಲಿ ಇಬ್ಬರು, ಮತ್ತಷ್ಟು ಆರೋಪಿಗಳ ಮಾಹಿತಿ ನೀಡುವುದಾಗಿ ಹೇಳಿದ್ದರು. ಅವರ ಹೇಳಿಕೆಯಂತೆ ಹಳೇಹುಬ್ಬಳ್ಳಿ ಕಡೆಗೆ ಕರೆದುಕೊಂಡು ಹೋದಾಗ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ.
ಈ ವೇಳೆ ಪೊಲೀಸರು ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಆದರೂ ಅವರು ಸಿಬ್ಬಂದಿ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಲು ಮುಂದಾದಾಗ, ಕಾಲಿಗೆ ಗುಂಡು ಹೊಡೆಯಲಾಗಿದೆ. ಘಟನೆಯಲ್ಲಿ ಸಿಬ್ಬಂದಿ ಪರಶುರಾಮ, ಶಂಭು, ಮಂಜುನಾಥ ಮತ್ತು ಸಾತಣ್ಣವರ ಅವರಿಗೂ ಗಾಯಗೊಂಡಿದ್ದಾರೆ ಎಂದರು.