ನಗರದಲ್ಲಿ ನಡೆಯಿತ್ತಿರುವ ಅಕ್ರಮ ಕ್ಯಾಸಿನೋ ಗಳನ್ನು ಮಟ್ಟ ಹಾಕಬೇಕು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಪೊಲೀಸರಿಗೆ ಸೂಚನೆ ನೀಡಿದರು.
ಬೆಂಗಳೂರು ನಗರ ಪೊಲೀಸ್ ಆಯುಕ್ತರೊಂದಿಗೆ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಅಂತಾರಾಷ್ಟ್ರೀಯ ನಗರವಾಗಿ ಬೆಳೆಯುತ್ತಿರುವ ಬೆಂಗಳೂರು ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳಬೇಕು. ರೌಡಿ ಗಳನ್ನೂ ಮಟ್ಟ ಹಾಕಬೇಕು. ಸುಳ್ಳು ದಾಖಲೆ ಪತ್ರ ತಯಾರಿಸಿ, ಸರ್ಕಾರಿ ಹಾಗೂ ನಾಗರಿಕರ ಭೂಮಿ ಮತ್ತು ನಿವೇಶನಗಳನ್ನು ಕಬಳಿಸುವವರ ವಿರುದ್ಧ ನಿಷ್ಠುರವಾಗಿ ಕ್ರಮ ಜರುಗಿಸಬೇಕು ಎಂದರು.
ಸಮಾಜದ ಅಶಾಂತಿಗೆ ಕಾರಣವಾಗುವ ಎಲ್ಲ ಅಕ್ರಮ ಕ್ಲಬ್, ಕ್ಯಾಸಿನೋಗಳೂ ಹಾಗೂ ಇನ್ನಿತರ ಕಾನೂನುಬಾಹಿರವಾಗಿ ನಡೆಯುವ ಎಲ್ಲ ರೀತಿಯ ಅಕ್ರಮಗಳನ್ನು ತಡೆಯಬೇಕು. ನಾಗರಿಕರ, ಅದರಲ್ಲಿಯೂ ಮಹಿಳೆಯರ ಹಾಗೂ ಮಕ್ಕಳ ರಕ್ಷಣೆಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.
ನಾಗರಿಕರ ರಕ್ಷಣೆಗೆ ಹತ್ತು ಹಲವು ಕಾನೂನುಗಳಿದ್ದು ಅವುಗಳಿಗೆ ಮಾನ್ಯತೆ ಬರಬೇಕಾದರೆ, ಪೊಲೀಸರು
ಕಟ್ಟು ನಿಟ್ಟಾಗಿ ಜಾರಿಗೆ ನೀಡಬೇಕು. ಹಾಗಾದರೆ ಮಾತ್ರ ಸಾರ್ವಜನಿಕರಿಗೆ ಪೊಲೀಸ್ ವ್ಯವಸ್ಥೆ ಬಗ್ಗೆ
ವಿಶ್ವಾಸ ಮೂಡುತ್ತದೆ ಎಂದರು.
ಅಕ್ರಮ ಕ್ಲಬ್ ಮತ್ತು ಕ್ಯಾಸಿನೋಗಳು ನಗರದಲ್ಲಿ ನಡೆಯುತ್ತಿರುವ ಬಗ್ಗೆ, ವರದಿಗಳಿವೆ. ಅವುಗಳನ್ನು ನಿರ್ದಾಕ್ಷಿಣ್ಯವಾಗಿ ನಿಲ್ಲಿಸಬೇಕು. ಇದಕ್ಕಾಗಿ ವಿಶೇಷ ಕಾರ್ಯಪಡೆ ರಚಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಪೊಲೀಸರಿಗೆ ನಿರ್ದೇಶಿಸಿದ್ದೇನೆ ಎಂದರು.