ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ G.S ಬೆಟ್ಟ ವಲಯದ ಸುತ್ತಮುತ್ತ ರೈತರಿಗೆ ತಲೆನೋವಾಗಿದ್ದ ಕಾಡಾನೆಯನ್ನು ಸೆರೆ ಹಿಡಿಯಲಾಗಿದೆ. ಸಾಕಾನೆಗಳಾದ ಅಭಿಮನ್ಯು, ಮಹೇಂದ್ರ, ಗಣೇಶ, ಭೀಮ ಸಹಾಯದಿಂದ ಅರವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿಯಲಾಯಿತು. ಕಡೈಕೋಟೆ ಎಂಬಲ್ಲಿ ಸೆರೆ ಹಿಡಿಯಲಾಗಿದೆ. ಬೆಳೆ ಹಾನಿ ಮಾಡುತ್ತಿದ್ದ ಕಾಡಾನೆಯನ್ನ ಸೆರೆ ಹಿಡಿಯುವಂತೆ ಅನೇಕ ಬಾರಿ ಒತ್ತಾಯ ಮಾಡಲಾಗಿತ್ತು. ಇದೀಗ ಆನೆಯನ್ನ ಸೆರೆ ಹಿಡಿದು, ಐನೋರ್ ಮಾರಿಗುಡಿ ಸಾಕಾನೆಗಳ ಶಿಬಿರಕ್ಕೆ ರವಾನೆ ಮಾಡಲಾಗಿದೆ. ಜಿಲ್ಲೆಯಲ್ಲಿ ಕಾಡಾನೆಗಳಿಂದ ಅನೇಕ ರೈತರು ಜೀವ ಕಳೆದುಕೊಂಡಿದ್ದರು. ಇತ್ತೀಚೆಗಷ್ಟೇ ಹೊಲದಲ್ಲಿರುವ ಸಮಯದಲ್ಲಿ ಅಂಧ ವ್ಯಕ್ತಿಯ ಮೇಲೆ ಕಾಡಾನೆಗಳು ದಾಳಿ ಮಾಡಿತ್ತು. ನಂತರ ಗುಂಡ್ಲುಪೇಟೆ ತಾಲೂಕಿನ ಬೆಟ್ಟ ಮಾದಹಳ್ಳಿ ಗ್ರಾಮದ ರೈತನ ಮೇಲೆ ಏಕಾಏಕಿ ಆನೆಗಳು ದಾಳಿ ಮಾಡಿ, ಬೈಕ್ನ್ನು ಜಖಂಗೊಳಿಸಿದ್ದವು. ಇದೀಗ ಆನೆಯನ್ನ ಸೆರೆ ಹಿಡಿದಿದ್ದು, ರೈತರು ನಿಟ್ಟುಸಿರು ಬೀಡುವಂತಾಗಿದೆ.