ಪತಿಯನ್ನು ಕೊಲೆ ಮಾಡಿದ ಪತ್ನಿ ಸೇರಿದಂತೆ ಐವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
ಕಲಬುರಗಿ ಭರತ ನಗರ ತಾಂಡಾದ ಹತ್ತಿರ 2017 ರಲ್ಲಿ ನಡೆದ ಸೈಯ್ಯದ್ ಮಸ್ತಾನ ಎಂಬಾತನ ಕೊಲೆ ಪ್ರಕರಣದ ಆರೋಪಿಗಳಿಗೆ ಇಲ್ಲಿನ 3ನೇ ಅಪ್ಪರ ಜಿಲ್ಲಾ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿದೆ.
ಸೈಯ್ಯದ್ ಆಸೀಫ್, ಸೈಯ್ಯದ್ ಮುಬಿನ್ ಮತ್ತು ಮಹ್ಮದ್ ಯುಸೂಫ್, ಕೊಲೆಗೆ ಪ್ರಚೋದನೆ ನೀಡಿದ ಪತ್ನಿ ಅಜ್ಮತ್ ನಾಜನೀನ್, ಖಮರ್ ಸುಲ್ತಾನ ಅವರಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದೆ.
ಕೊಲೆಯಾದ ಸೈಯ್ಯದ ಮಸ್ತಾನ ಅಜ್ಮತ್ ನಾಜನೀನ್ ಜೊತೆ ಮದುವೆಯಾಗಿದ್ದ. ಮದುವೆಯಾದ ನಂತರ ಸೈಯ್ಯದ್ ಮಸ್ತಾನ್ ಅಜ್ಮತ್ ನನ್ನು ಸರಿಯಾಗಿ ನೋಡಿಕೊಳ್ಳದೇ ಇರುವ ಕಾರಣಕ್ಕೆ ಆತನನ್ನು ಭರತ ನಗರ ತಾಂಡಾ ಹತ್ತಿರ ಕಲ್ಲಿನಿಂದ ಮುಖಕ್ಕೆ ಜಜ್ಜಿ ಕೊಲೆ ಮಾಡಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ 3ನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಜಗದೀಶ ವಿ.ಎನ್., ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಮತ್ತು 2 ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.