ಕಲಬುರ್ಗಿ: ಜಿಲ್ಲಾ ಆಸ್ಪತ್ರೆಯ ಎಕ್ಸ್ ರೇ ತೆಗೆಯುವ ಕೋಣೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನಾಲ್ವರು ಸಿಬ್ಬಂದಿ ಅಸ್ವಸ್ಥಗೊಂಡಿದ್ದಾರೆ.
ಎಸಿ ಸ್ಟಬಿಲೈಜರ್ ಸ್ಫೋಟಗೊಂಡ ಪರಿಣಾಮ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಇಟ್ಟಿದ್ದ ದಹನ ಸಿಲಿಂಡರ್ ನಿಂದ ಆಸ್ಪತ್ರೆ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಆದರೆ ಈ ಸಂದರ್ಭದಲ್ಲಿ ಕೋಣೆಯಲ್ಲಿರುವ ಮಷಿನ್ ಹೊರತೆಗೆಯಲು ಹೋದಾಗ ವಿಷಕಾರಿ ಹೊಗೆ ಸೇವಿಸಿದ ಪರಿಣಾಮ ನಾಲ್ವರು ಸಿಬ್ಬಂದಿ ಅಸ್ವಸ್ಥಗೊಂಡಿದ್ದಾರೆ.
ಡಿ ಗ್ರೂಪ್ ಸಿಬ್ಬಂದಿ ಸಾತಲಿಂಗ್ , ಫಜಲ್, ರಾಚಪ್ಪ ಮತ್ತು ರವಿಕುಮಾರ್ ಅಸ್ವಸ್ಥರಾಗಿದ್ದಾರೆ. ಬೆಂಕಿ ನಂದಿಸಿದ ಬಳಿಕ ದಟ್ಟ ಹೊಗೆ ಕಾಣಿಸಿಕೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ ಒಳ ನುಗ್ಗಿದ ಸಿಬ್ಬಂದಿ ಎಕ್ಸ್ ರೇ ಮಷಿನ್ ಸೇರಿದಂತೆ ಕೋಣೆಯಲ್ಲಿರುವ ಲಕ್ಷಾಂತರ ಮೌಲ್ಯ ಬೆಲೆಬಾಳುವ ಯಂತ್ರೋಪಕರಣಗಳನ್ನು ಹೊರ ತಂದಿದ್ದಾರೆ. ಅಸ್ವಸ್ಥರಾಗಿರುವ ಸಿಬ್ಬಂದಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.