Publish Date: Saturday, 10 July 2021 (18:40 IST)
Updated Date: Saturday, 10 July 2021 (18:42 IST)
ಹೆಗಲ ಮೇಲೆ ಕೈ ಹಾಕಲು ಬಂದಿದ್ದ ಕಾಂಗ್ರೆಸ್ ಕಾರ್ಯಕರ್ತನಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಪಾಳ ಮೋಕ್ಷ ಮಾಡಿದ್ದು, ರಾಜಕೀಯ ವಲಯದಲ್ಲಿ ಟೀಕೆಗೆ ಗುರಿಯಾಗಿದೆ. ಅನಾರೋಗ್ಯದಿಂದಾಗಿ ಕೆ.ಎಂ ದೊಡ್ಡಿ ಆಸ್ಪತ್ರೆಗೆ ಮಂಡ್ಯದ ಹಿರಿಯ ರಾಜಕಾರಣಿ ಮಾದೇಗೌಡರು ದಾಖಲಾಗಿದ್ದಾರೆ. ಮಾದೇಗೌಡ ಆರೋಗ್ಯ ವಿಚಾರಿಸಲು ಡಿಕೆಶಿ ತೆರಳಿದ್ದರು. ಈ ವೇಳೆ ಮದ್ದೂರು ತಾಲೂಕಿ ಬೊಮ್ಮಾನಹಳ್ಳಿ ಕಾಂಗ್ರೆಸ್ ಮುಖಂಡ ಉಮೇಶ್ ಎನ್ನುವವರು ಡಿಕೆಶಿ ಹೆಗಲ ಮೇಲೆ ಕೈ ಹಾಕಲು ಮುಂದಾಗಿದ್ದರು. ಈ ಸಂಧರ್ಭದಲ್ಲಿ ಡಿಕೆಶಿ ಕೈ ಕಾರ್ಯಕರ್ತನಿಗೆ ಕಪಾಳ ಮೋಕ್ಷ ಮಾಡಿ ಸರಿಯಾಗಿ ನಡೆದುಕೋ ಎಂದು ಎಚ್ಚರಿಸಿದ್ದಾರೆ. ಜೊತೆಗೆ ವಿಡಿಯೋ ಡಿಲೀಟ್ ಮಾಡುವಂತೆ ತಮ್ಮ ಸಾಮಾಜಿಕ ಜಾಲತಾಣ ನಿರ್ವಹಣೆ ಮಾಡುವ ಸಿಬ್ಬಂದಿಗೆ ಸೂಚಿಸಿದ್ದಾರೆ. ಡಿಕೆಶಿ ಅವರ ನಡೆಯನ್ನು ಆಡಳಿತ ಪಕ್ಷ ಬಿಜೆಪಿ ಕಟುವಾಗಿ ಟೀಕಿಸಿದೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ನೀವು ಕೊತ್ವಾಲನ ಶಿಷ್ಯ ಆಗಿರಬಹುದು, ಜೈಲಿಗೂ ಹೋಗಿ ಬಂದಿರಬಹುದು ಆದರೆ ಆ ರಾಕ್ಷಸಿ ಗುಣಗಳನ್ನು ಅಮಾಯಕರ ಮೇಲೆ ತೋರ್ಪಡಿಸಬೇಡಿ ಎಂದು ಮಾರ್ಮಿಕವಾಗಿ ಡಿಕೆಶಿ ವಿರುದ್ದ ಬಿಜೆಪಿ ಚಾಟಿ ಬೀಸಿದೆ.