ಕೊರೊನಾ ಸೋಂಕು ಜಾಗತಿಕ ಮಟ್ಟದಲ್ಲಿ ಇಳಿಕೆಯಾಗುತ್ತಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥೆ ಸೌಮ್ಯಾ ಸ್ವಾಮಿನಾಥನ್ ಕಳವಳ ವ್ಯಕ್ತಪಡಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೊರೊನಾ ವೈರಸ್ ಸೋಂಕು ಪ್ರಮಾಣದಲ್ಲಿ ಇಳಿಯುತ್ತಿಲ್ಲ. ಇದಕ್ಕೆ ಕಾರಣ ರೂಪಾಂತರಿ ಡೆಲ್ಟಾ ವೈರಸ್ ಹೆಚ್ಚು ವೇಗವಾಗಿ ಹರಡುತ್ತಿರುವುದು ಎಂದು ಹೇಳಿದರು.
ವಿಶ್ವ ಆರೋಗ್ಯ ಸಂಸ್ಥೆಯ 6 ವಲಯಗಳ ಪೈಕಿ 5ರಲ್ಲಿ ಕೋವಿಡ್ ಪ್ರಭಾವ ಕುಗ್ಗಿಲ್ಲ. ಕಳೆದ 2 ವಾರಗಳಲ್ಲಿ ಆಫ್ರಿಕಾ ಖಂಡದಲ್ಲಿ ಶೇ.30ರಿಂದ 40ರಷ್ಟು ಏರಿಕೆ ಕಂಡಿದೆ ಎಂದು ಅವರು ವಿವರಿಸಿದರು.
ಕಳೆದ 24 ಗಂಟೆಯಲ್ಲಿ ಜಾಗತಿಕ ಮಟ್ಟದಲ್ಲಿ 5,00,000 ಸೋಂಕು ಪ್ರಕರಣಗಳು 9300 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಇದು ಕೊರೊನಾ ಇಳಿಕೆಯ ಲಕ್ಷಣವಲ್ಲ ಎಂದು ಸೌಮ್ಯಾ ವಿವರಿಸಿದರು.
ಡೆಲ್ಟಾ ರೂಪಾಂತರಿ, ಸಾಮಾಜಿಕ ಅಂತರ ಇಲ್ಲದೇ ಇರುವುದು, ಲಾಕ್ ಡೌನ್ ನಿಯಮ ಸಡಿಲಿಕೆ ಮತ್ತು ನಿಧಾನಗತಿಯ ಲಸಿಕೆ ಕಾರ್ಯಕ್ರಮ. ಈ ನಾಲ್ಕು ಕಾರಣಗಳಿಂದ ಕೊರೊನಾ ಪ್ರಭಾವ ಕುಂಠಿತ ಆಗುತ್ತಿಲ್ಲ ಎಂದು ಅವರು ವಿವರಿಸಿದರು.