ಅರಣ್ಯ ಸಂರಕ್ಷಣೆಯಲ್ಲಿ ತೊಡಗಿ ಹುತಾತ್ಮರಾದವರಿಗೆ ಪರಿಹಾರ ಮೊತ್ತವನ್ನು 30 ರಿಂದ 50 ಲಕ್ಷ ರೂ.ಗಳಿಗೆ ಏರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬೆಂಗಳೂರಿನ ಅರಣ್ಯ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನ ಕಾರ್ಯಕ್ರಮದಲ್ಲಿ ಅರಣ್ಯ ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಚವಿಟ್ಟು ಗೌರವ ಸಮರ್ಪಿಸಿದ ನಂತರ ಅವರು ಮಾತನಾಡಿದರು.
ಜೀವಮಾನದ ಪರಿಸ್ಥಿತಿಗೆ ಅನುಗುಣವಾಗಿ ಪರಿಹಾರ ಧನ ಹೆಚ್ಚಿಸಲು ನಿರ್ಧರಿಸಲಾಗಿದೆ. ನಾಡು, ನಾಡಿನ ಜನರನ್ನು ರಕ್ಷಿಸುತ್ತಿರುವ ಅರಣ್ಯ ಸಂರಕ್ಷಕರಿಗೆ ಸರ್ಕಾರ ರಕ್ಷಣೆ ನೀಡಲಿದೆ ಎಂದರು.
ಕಳೆದ ಒಂದು ವರ್ಷದಲ್ಲಿ ಅರಣ್ಯ ರಕ್ಷಣೆಯಲ್ಲಿ ಓರ್ವ ಸಿಬ್ಬಂದಿ ಮೃತಪಟ್ಟಿದ್ದಾರೆ. ಜನ- ವನ್ಯಜೀವಿಗಳ ಜೀವನ, ಪರಿಸರ ಹಿತದೃಷ್ಟಿಯಿಂದ ಅರಣ್ಯ ಸಂರಕ್ಷಣೆ ಹಾಗೂ ಅರಣ್ಯ ಪ್ರದೇಶದ ವೃದ್ಧಿ ಅಗತ್ಯವಾಗಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಕಾರ್ಯಕ್ರಮದಲ್ಲಿ ಅರಣ್ಯ ನಿಗಮದ ಅಧ್ಯಕ್ಷೆ ತಾರಾ ಅನುರಾಧಾ, ಇಲಾಖೆ ಅಧಿಕಾರಿಗಳು ಇದ್ದರು.