Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ವಾಲ್ಮೀಕಿ ನಿಗಮದ ಹಣ ಯಾರದ್ದೆಲ್ಲಾ ಖಾತೆಗಳಿಗೆ ಹೋಯ್ತು ಸಿಬಿಐ ತನಿಖೆಯಾಗಲಿ: ಸಿಟಿ ರವಿ

CT Ravi

Krishnaveni K

ಬೆಂಗಳೂರು , ಶುಕ್ರವಾರ, 28 ಜೂನ್ 2024 (17:11 IST)
ಬೆಂಗಳೂರು: ಬಹುರಾಜ್ಯಗಳಿಗೆ ವಿಸ್ತರಿಸಿರುವ ಬೃಹತ್ ಮೊತ್ತದ ವಾಲ್ಮೀಕಿ ನಿಗಮದ ಹಗರಣದ ಸಂಬಂಧ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕು ಹಾಗೂ ಇದರ ತನಿಖೆಯನ್ನು ಸಿಬಿಐ ನಡೆಸಬೇಕು ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ಆಗ್ರಹಿಸಿದರು.

ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಇಲಾಖೆ ವ್ಯಾಪ್ತಿಯಲ್ಲಿ ನಡೆದ ಬಹುದೊಡ್ಡ ಹಗರಣ ಇದಾಗಿದೆ. 100ಕ್ಕೆ ನೂರರಷ್ಟು ಹಣ ವರ್ಗಾಯಿಸಿ ಲೂಟಿ ಮಾಡಿದ ಹಗರಣ. ಈ ಹಗರಣದಲ್ಲಿ ಸಿಎಂ ನೈತಿಕತೆ ಪ್ರಶ್ನೆ ಬರುವ ಕಾರಣ ಹೊಣೆ ಹೊರಲು ಕೇಳಿದ್ದೆವು. ಆದರೆ, ಅವರು ವಿಷಯಾಂತರ ಮಾಡುತ್ತಾರೆ ಎಂದು ಆಕ್ಷೇಪಿಸಿದರು. ಈ ಸಂಬಂಧ ಇವತ್ತು ಚಳವಳಿ ನಡೆಸಿ ಸಿಎಂ ರಾಜೀನಾಮೆಗೆ ಆಗ್ರಹಿಸಿದ್ದೇವೆ ಎಂದರು.

ಸರಕಾರದ ತನಿಖೆಯ ಬಗ್ಗೆ ನಮಗೆ ಸಂಶಯ ಇದೆ. ಇದು ಬಹುರಾಜ್ಯಗಳಿಗೆ ಸಂಬಂಧಿಸಿದ ಹಗರಣ. ಆಪಾದಿತರು ಆಂಧ್ರ, ತೆಲಂಗಾಣಕ್ಕೂ ಸೇರಿದ್ದಾರೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯವು ಸಿಬಿಐ ತನಿಖೆ ಕೋರಿ ಪತ್ರ ಬರೆದಿದೆ. ಆದರೂ, ಕರ್ನಾಟಕ ಸರಕಾರ ಸಿಬಿಐ ತನಿಖೆಗೆ ಇದನ್ನು ಅಧಿಕೃತವಾಗಿ ವಹಿಸಿಲ್ಲವೇಕೆ ಎಂದು ಪ್ರಶ್ನಿಸಿದರು.

ನಾಗೇಂದ್ರರ ಸಂಬಂಧಿ, ಸಿರಗುಪ್ಪದ ಅಭ್ಯರ್ಥಿಯಾಗಿದ್ದ ಮುರಳಿ ಪಾತ್ರ ಏನು ಎಂದು ತನಿಖೆಗೆ ಆಗ್ರಹಿಸಿದರು. ನಿಗಮಗಳ ಕಾಮಗಾರಿಯಲ್ಲೂ ನೆಕ್ಕುಂಟಿ ನಾಗರಾಜ್ ಪಾತ್ರ ಇದೆ, ಲೂಟಿಯಾಗಿದೆ ಎಂದು ಆರೋಪಿಸಿದ ಅವರು, ನೆಕ್ಕುಂಟಿ ನಾಗರಾಜ್ ಮಾವ ಅರ್ಹತೆ ಇಲ್ಲದಿದ್ದರೂ ಹಾಸ್ಟೆಲ್ ಆಹಾರ ಸರಬರಾಜಿಗೆ ಗುತ್ತಿಗೆ ಪಡೆದಿದ್ದಾರೆ ಎಂದು ಆರೋಪಿಸಿದರು.

ನಾಗೇಂದ್ರ ಅವರನ್ನು ರಕ್ಷಿಸಲು ಸರಕಾರ ಪ್ರಯತ್ನ ಮಾಡುತ್ತಿದೆ ಎಂದು ಸಂಶಯ ವ್ಯಕ್ತಪಡಿಸಿದರು. ನಾಗೇಂದ್ರ ಅವರನ್ನು ಮುಟ್ಟಿದರೆ ಅವರು ಯಾರ್ಯಾರಿಗೆ ಹಣ ಕೊಟ್ಟಿದ್ದಾಗಿ ಬಾಯಿ ಬಿಡುವ ಭಯದಿಂದ ಅವರ ರಕ್ಷಣೆಗೆ ಸರಕಾರ ಹೊರಟಿದೆ ಎಂದು ಅನುಮಾನ ವ್ಯಕ್ತಪಡಿಸಿದರು. 11 ಜನರ ಬಂಧನವಾಗಿದ್ದು, ಜಪ್ತಾದ ಹಣ 14.07 ಕೋಟಿ ಮಾತ್ರ. ಬಾಕಿ ಹಣ ಎಲ್ಲಿ ಹೋಗಿದೆ? ಇತರ ಯಾರ್ಯಾರ ಖಾತೆಗೆ ಹಣ ಹೋಗಿದೆ? ಅವರ ಮೇಲೆ ಯಾಕೆ ಕ್ರಮ ಕೈಗೊಂಡಿಲ್ಲ? ಉಳಿಕೆ ಹಣ ಯಾಕೆ ಜಪ್ತಿ ಮಾಡಿಲ್ಲ ಎಂದು ಪ್ರಶ್ನೆಗಳನ್ನು ಮುಂದಿಟ್ಟರು.

700ಕ್ಕೂ ಹೆಚ್ಚು ಖಾತೆಗೆ ಹಣ ಹೋಗಿತ್ತು. ಅಲ್ಲಿಂದ ಡ್ರಾ ಮಾಡಿ ಎಲ್ಲಿಗೆ ಹೋಗಿದೆ? ಅದರ ಮೂಲವನ್ನು ಪತ್ತೆ ಮಾಡುವ ಕೆಲಸ ಆಗಬೇಕು ಎಂದ ಅವರು, ಛತ್ತೀಸಗಡ, ಆಂಧ್ರ, ತೆಲಂಗಾಣ, ಕರ್ನಾಟಕ ಸೇರಿ ನಾಲ್ಕೈದು ರಾಜ್ಯಗಳ ನಂಟು ಇರುವ ಕಾರಣ ಸಮಗ್ರ ಮಾಹಿತಿಯ ಜೊತೆಗೆ ಸಿಬಿಐಗೆ ಈ ಕೇಸನ್ನು ವರ್ಗಾವಣೆ ಮಾಡುವಂತೆ ಒತ್ತಾಯಿಸಿದರು.
 

Share this Story:

Follow Webdunia kannada

ಮುಂದಿನ ಸುದ್ದಿ

ಹಾವೇರಿ ದುರಂತದಲ್ಲಿ ಮಡಿದವರಿಗೆ ಕೊನೆಗೂ ಪರಿಹಾರ ಘೋಷಿಸಿದ ಸಿಎಂ ಸಿದ್ದರಾಮಯ್ಯ