ಕೊರೋನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಕರ್ಫ್ಯೂ ಹೇರಲಾಗಿದ್ದರೂ, ತಿರುಗಾಡುವವರನ್ನು ಗುರುತಿಸಿ ದಿನಕ್ಕೆ 100 ಬೈಕ್ ಗಳನ್ನು ವಶಕ್ಕೆ ಪಡೆದುಕೊಳ್ಳಿ ಅಂತ ಡಿಸಿಎಂ ಹೇಳಿದ್ದಾರೆ.
ಕರ್ಫ್ಯೂ ಉಲ್ಲಂಘನೆ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಉಪಮುಖ್ಯಮಂತ್ರಿಗಳು, ಸಮಾಜ ಕಲ್ಯಾಣ, ಲೋಕೋಪಯೋಗಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಎಂ. ಕಾರಜೋಳ ಸೂಚಿಸಿದ್ದಾರೆ.
ಕಲಬುರಗಿ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಕೊರೋನಾ ವೈರಸ್ ತಡೆಗಟ್ಟುವ ಹಿನ್ನೆಲೆಯಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಪರಿಶೀಲನಾ ಸಭೆ ನಡೆಸಿದ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ನಿಷೇಧಾಜ್ಞೆ ಉಲ್ಲಂಘಿಸಿ ಓಡಾಡುವರ ಬೈಕ್ ಗಳನ್ನು ಜಫ್ತಿ ಮಾಡಬೇಕು. ಕನಿಷ್ಠ ದಿನಕ್ಕೆ 100 ಬೈಕ್ ವಶಪಡಿಸಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.
ಇದೇವೇಳೆ ಸಾಮಾಜಿಕ ಜಾಲತಾಣಗಳು ಸುಳ್ಳು ಸುದ್ದಿ ಪ್ರಕಟಿಸುವ ಮೂಲಕ ಸಮಾಜದಲ್ಲಿ ಗೊಂದಲ ಉಂಟು ಮಾಡುತ್ತಿವೆ. ಇಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಬರೀ ಎಚ್ಚರಿಕೆ ನೀಡಿದರೆ ಸಾಲದು, ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಖಡಕ್ಕಾಗಿ ಹೇಳಿದರು.