ಬೆಂಗಳೂರು: ಕೊರೊನಾ ಸೋಂಕಿನಿಂದಾಗಿ ನಮ್ಮ ಮೆಟ್ರೋ ಆದಾಯ ಕೋಟಿಗಟ್ಟಲೆ ಕುಸಿದಿದ್ದು. ಸುಮಾರು 5 ತಿಂಗಳಿಗಿಂತಲೂ ಹೆಚ್ಚು ಕಾಲ ಮೆಟ್ರೋ ಸ್ಥಗಿತಗೊಂಡಿದ್ದರಿಂದ ಬಿಎಂಆರ್‌ಸಿಎಲ್ ಸಂಸ್ಥೆ ಒಟ್ಟು 904 ಕೋಟಿ ರೂ ನಷ್ಟ ಅನುಭವಿಸಿದೆ.
ಕಳೆದ ವರ್ಷ ನಮ್ಮ ಕೋವಿಡ್ ಲಾಕ್ ಡೌನ್ ನಿಂದ ಮೆಟ್ರೋ 641 ಕೋಟಿ ರೂ ನಷ್ಟ ಅನುಭವಿಸಿತ್ತು. ಈ ಸಾಲಿನಲ್ಲಿ ಅಂದರೆ ಭಾನುವಾರದವೆರೆಗೆ ಬರೋಬ್ಬರಿ 904 ಕೋಟಿ ಅಂದರೆ ಶೇ.41ಕ್ಕಿಂತ ಹೆಚ್ಚು ಪ್ರಮಾಣದ ನಷ್ಟವಾಗಿದೆ.
ಮೊದಲ ಲಾಕ್‌ಡೌನ್ ಸಂದರ್ಭದಲ್ಲಿ ಮಾರ್ಚ್ 2020 ರಲ್ಲಿ ನಮ್ಮ ಮೆಟ್ರೋ ಐದು ತಿಂಗಳ ಕಾಲ ಸಂಚಾರವನ್ನು ಸ್ಥಗಿತಗೊಳಿಸಿತ್ತು. ಬಳಿಕ ಸೆಪ್ಟೆಂಬರ್ 7ರಿಂದ ಮತ್ತೆ ಸಂಚಾರ ಪ್ರಾರಂಭಿಸಿತ್ತು.
ಪ್ರಯಾಣಿಕರ ಸಂಖ್ಯೆ ಬೆರಳೆಣಿಕೆಯಷ್ಟಿದಿದ್ದರಿಂದ ಹೀಗಾಗಿ ಮೆಟ್ರೋ ಸಂಚಾರ ಆರಂಭವಾದರೂ ಆದಾಯ ಮಾತ್ರ ಬರಲಿಲ್ಲ.
ಕಳೆದ ಆರ್ಥಿಕ ವರ್ಷದಲ್ಲಿ ನಮ್ಮ ಮೆಟ್ರೋ 73.92 ಕೋಟಿ ರೂ ಆದಾಯ ಗಳಿಸಿತ್ತು. ರೈಲುಗಳ ನಿರ್ವಹಣೆ, ಸಿಬ್ಬಂದಿಗೆ ಸಂಬಳ ಸೇರಿದಂತೆ ಸಾಕಷ್ಟು ನಷ್ಟ ಅನುಭವಿಸಿತ್ತು. ಬ್ಯಾಂಕ್‌ಗಳಿಂದ ಕಡಿಮೆ ಅವಧಿಗೆ ಸಾಲ ಕೊಡಿಸುವಂತೆ ಕೂಡ ಮೆಟ್ರೋ ಸಂಸ್ಥೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ.
ಕಳೆದ ಒಂದೂವರೆ ವರ್ಷದಿಂದ ನಮ್ಮ ಮೆಟ್ರೋದಲ್ಲಿ ಟೋಕನ್ ವ್ಯವಸ್ಥೆ ಸ್ಥಗಿತಗೊಳಿಸಲಾಗಿತ್ತು, ಕೊರೊನಾ ಮೊದಲ ಲಾಕ್‌ಡೌನ್ ಬಳಿಕ ಮೆಟೊ
ಸಂಚಾರ ಆರಂಭವಾದಾಗ ಟೋಕನ್ ವ್ಯವಸ್ಥೆ ಜಾರಿ ಮಾಡಿದರೆ ಹೆಚ್ಚು ಮಂದಿ ಸರತಿಯಲಿ ನಿಲ್ಲಬೇಕಾಗುತ್ತದೆ ಎಂದು ಆತಂಕ ಮನೆ ಮಾಡಿತ್ತು. ಕೇವಲ ಸ್ಮಾರ್ಟ್‌ಕಾರ್ಡ್ ಹೊಂದಿರುವವರು ಮಾತ್ರ ಮೆಟ್ರೋದಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಗಿತ್ತು. ಆದರೆ ಈ ಕ್ರಮದಿಂದಾಗಿ ನಮ್ಮ ಮೆಟ್ರೋ ಆದಾಯಕ್ಕೆ ಹೊಡೆತ ಬಿದ್ದ ಕಾರಣ ಟೋಕನ್ ವ್ಯವಸ್ಥೆ ಮತ್ತೆ ಸೋಮವಾರದಿಂದ ಜಾರಿಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಮತ್ತೊಂದು ಸುತ್ತಿನ ಲಾಕ್‌ಡೌನ್ ಸೋಮವಾರ ಸಡಿಲಿಕೆ ಮಾಡಲಾಗಿದ್ದು, ಬೆಳಗ್ಗೆ 7 ರಿಂದ ಸಂಜೆ 8ರವರೆಗೆ ನಮ್ಮ ಮೆಟ್ರೋ ಸಂಚಾರ ನಡೆಸಿತು ಹಾಗೆಯೇ ನಮ್ಮ ಮೆಟ್ರೋ ರೈಲು ವಾರಾಂತ್ಯದಲ್ಲೂ ಕೂಡ ಕಾರ್ಯನಿರ್ವಹಿಸಲಿದೆ ಎಂದು ಬಿಎಂಆರ್‌ಸಿಎಲ್ ಮಾಹಿತಿ ನೀಡಿದೆ.
ಪ್ರತಿ 5 ರಿಂದ 15 ನಿಮಿಷಗಳ ಅಂತರದಲ್ಲಿ ಮೆಟ್ರೋ ರೈಲು ಚಲಿಸುತ್ತಿದ್ದು, ಈ ಹಿಂದೆ ಮೊದಲ ಹಂತದ ಅನ್ ಲಾಕ್ ಆಗುತ್ತಿದ್ದಂತೆ ಬೆಳಗ್ಗೆ 7 ರಿಂದ 11 ಮತ್ತು ಮಧ್ಯಾಹ್ನ 3 ರಿಂದ 6 ಗಂಟೆಯವರೆಗೆ ಮಾತ್ರ ನಮ್ಮ ಮೆಟ್ರೋ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ನಂತರ ಅವಧಿಯನ್ನು ಸೋಮವಾರದಿಂದ ಶುಕ್ರವಾರದ ತನಕ ಬೆಳಗ್ಗೆ 7ರಿಂದ ಸಂಜೆ 6 ಗಂಟೆವರೆಗೆ ವಿಸ್ತರಿಸಿತ್ತು.