ಬೆಂಗಳೂರು : ಸೋಮವಾರದ ಅಧಿವೇಶನದಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಬಹುಮತ ಸಾಬೀತುಪಡಿಸುತ್ತಿರುವ ಹಿನ್ನಲೆಯಲ್ಲಿ ಇಂದು ಮಧ್ಯಾಹ್ನ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ.
ನಾಳೆ ಬಹುಮತ ಸಾಬೀತಿನ ವೇಳೆ ಎಲ್ಲಾ ಶಾಸಕರು ಹಾಜರಾಗಿರುವಂತೆ ಸೂಚಿಸಲು ಈ ಸಭೆ ಕರೆಯಲಾಗಿದೆ ಎನ್ನಲಾಗಿದೆ. ಹಾಗೇ ಇಂದು ಎಲ್ಲ ಬಿಜೆಪಿ ಶಾಸಕರಿಗೆ ವಿಪ್ ಜಾರಿಗೊಳಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
ಅಲ್ಲದೇ ಸಭೆ ಬಳಿಕ ಶಾಸಕರಿಗೆ ಖಾಸಗಿ ಹೋಟೆಲ್ನಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಿಜೆಪಿಯ ಕೆಲವು ಶಾಸಕರು ಕಾಂಗ್ರೆಸ್- ಜೆಡಿಎಸ್ ನಾಯಕರ ಸಂಪರ್ಕದಲ್ಲಿರುವ ಬಗ್ಗೆ ಈಗಾಗಲೇ ಸುದ್ದಿಗಳು ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಶಾಸಕರು ಆಪರೇಷನ್ ಹಸ್ತಕ್ಕೆ ಒಳಗಾಗದೆ ಇರುವಂತೆ ಎಚ್ಚರಿಕೆ ವಹಿಸಲು ಹಾಗೂ ನಾಳೆ ಎಲ್ಲಾ ಶಾಸಕರೂ ಗೈರಾಗದೆ ಅಲ್ಲಿಂದಲೇ ನೇರವಾಗಿ ವಿಧಾನಸೌಧಕ್ಕೆ ಬರಲಿ ಎಂದು ಈ ತೀರ್ಮಾನಕ್ಕೆ ಬರಲಾಗಿದೆ ಎನ್ನಲಾಗಿದೆ.