ಮೇ 19ರಂದು ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನಡೆಯಲಿದೆ. ಆದರೆ ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ರಾಠೋಡ್ ವಿರುದ್ಧ ಮತದಾರರ ಪಟ್ಟಿಯಲ್ಲಿ ನಾಲ್ಕು ಕಡೆ ಹೆಸರಿರುವ ಆರೋಪ ಕೇಳಿಬಂದಿದೆ.
ರಾಜ್ಯ ಚುನಾವಣಾ ಆಯೋಗಕ್ಕೆ ಬಿಜೆಪಿ ನಿಯೋಗದಿಂದ ದೂರು ಸಲ್ಲಿಕೆ ಮಾಡಲಾಗಿದೆ. ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಒಂದು, ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಎರಡು, ಚಿಂಚೋಳಿ ಕ್ಷೇತ್ರದ ಒಂದು ಕಡೆ ಮತದಾರರ ಪಟ್ಟಿಯಲ್ಲಿ ಸುಭಾಷ್ ರಾಠೋಡ್ ಹೆಸರಿದೆ ಎಂದು ಆರೋಪ ಮಾಡಲಾಗಿದೆ.
ಈ ಬಗ್ಗೆ ಈಗಾಗಲೇ ಬಿಜೆಪಿ ಪರವಾಗಿ ಆಕ್ಷೇಪ ಸಲ್ಲಿಸಿದ್ದಾರೆ ವಕೀಲ ಎನ್.ಎಸ್.ಪಾಟೀಲ್. ಪ್ರಜಾಪ್ರತಿನಿಧಿ ಕಾಯ್ದೆ 1950ರ ಕಲಂ 17 ಉಲ್ಲಂಘನೆಯಾಗಿದೆ ಎಂದು ಆರೋಪಿಸಲಾಗಿದೆ. ಅಷ್ಟೇ ಅಲ್ಲದೇ ಸುಭಾಷ್ ರಾಠೋಡ್ ವಿರುದ್ಧ ಒಂದು ಎಫ್ಐಆರ್ ದಾಖಲಾಗಿದ್ದನ್ನು ಮರೆಮಾಚಿದ್ದಾರೆಂದು ಆರೋಪಿಸಲಾಗಿದೆ.
ಚಿಂಚೋಳಿ ತಾಲೂಕಿನ ಶೇರಿ ಬಡಾ ತಾಂಡಾದಲ್ಲಿ ಮತದಾರ ಪಟ್ಟಿಯಲ್ಲಿ ತಮ್ಮ ಹೆಸರಿದೆ ಎಂದಿದ್ದಾರೆ ರಾಠೋಡ್. ಈ ಹಿಂದೆಯೇ ಮತದಾರ ಪಟ್ಟಿಯಲ್ಲಿ ಹೆಸರು ಡಿಲೀಟ್ ಮಾಡಲು ಮನವಿ ಮಾಡಿದ್ದಾಗಿ ಸುಭಾಷ್ ರಾಠೋಡ್ ಸಮಜಾಯಿಷಿ ನೀಡಿದ್ದಾರೆ. ನಾಮಪತ್ರ ಪರಿಶೀಲನೆ ವೇಳೆ ಸಮಜಾಯಿಷಿ ನೀಡಿದ್ದಾರೆ ಸುಭಾಷ್ ರಾಠೋಡ್.