ಚಾಮರಾಜಪೇಟೆ ಈದ್ಗಾ ಮೈದಾನ ವಿವಾದಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಮೈದಾನ ಬಿಬಿಎಂಪಿಯ ಆಸ್ತಿ ಅನ್ನೋ ಬಗ್ಗೆ ದಾಖಲೆ ಪತ್ತೆಯಾಗಿದೆ. ಈ ಹಿಂದೆ ಬಿಬಿಎಂಪಿ ಕೂಡ ಮೈದಾನ ನಮಗೆ ಸೇರಿದ್ದು ಅಂತಾ ಹೇಳಿಕೊಂಡಿತ್ತು, ಆದ್ರೆ ಅದರ ದಾಖಲೆಗಳು ಸಿಗದೇ ಸುಮ್ಮನಾಗಿತ್ತು. ಇದೀಗ ಈದ್ಗಾ ಮೈದಾನ ಬಿಬಿಎಂಪಿಯ ಆಸ್ತಿ ಎಂಬ ದಾಖಲೆ ಪತ್ತೆಯಾಗಿದೆ. ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಗೊತ್ತಿಲ್ಲದ ಸತ್ಯ ಹೊರಗೆ ಬಂದಿದ್ದು, ಅಧಿಕಾರಿಗಳು ಆಯುಕ್ತರಿಂದಲೇ ಸತ್ಯವನ್ನ ಮುಚ್ಚಿಟ್ಟಿದ್ರಾ ಅನ್ನೋ ಅನುಮಾನಗಳು ಕೂಡ ಮೂಡುತ್ತಿವೆ. 2021ರ ಸರ್ವೇ ಪ್ರಕಾರ 299 ಆಸ್ತಿ ಬಿಬಿಎಂಪಿಗೆ ಸೇರಿದೆ ಎಂದು ಅಧಿಸೂಚನೆ ಹೊರಡಿಸಲಾಗಿದೆ. 299 ಆಸ್ತಿ ಪೈಕಿ ಈದ್ಗಾ ಮೈದಾನವೂ ಬಿಬಿಎಂಪಿಯ ಆಸ್ತಿ ಅಂತಾ ಗುರ್ತಿಸಲಾಗಿದೆ. ಇನ್ನು 2017ರಲ್ಲಿ ಆಟದ ಮೈದಾನಗಳ ಸಮೀಕ್ಷೆ ನಡೆಸಿದ್ದ ಬಿಬಿಎಂಪಿಯ ದಾಖಲೆಯಲ್ಲಿ ಈ ಅಂಶ ಪತ್ತೆಯಾಗಿದೆ. ಒಟ್ಟು 9016 ಚದರ ಮೀಟರ್ ಇರುವ ಚಾಮರಾಜಪೇಟೆ ಮೈದಾನಲ್ಲಿ ನಮಾಜ್ ಮಾಡುವ ಟವರ್ ನಿರ್ಮಾಣದ ಬಗ್ಗೆ ಉಲ್ಲೇಖ ಇಲ್ಲ ಎನ್ನಲಾಗ್ತಿದೆ. ಸದ್ಯ ಈ ದಾಖಲೆಯಿಂದ ಮೈದಾನ ಪಾಲಿಕೆಗೆ ಸೇರುತ್ತೆ ಅನ್ನೋ ಸತ್ಯ ಬಯಲಾಗಿದ್ದು, ಮುಂದೆ ಇದು ಇನ್ಯಾವ ರೀತಿ ತಿರುವು ಪಡೆದುಕೊಳ್ಳುತ್ತೋ ಕಾದು ನೋಡಬೇಕಿದೆ.