2021-22ನೇ ಶೈಕ್ಷಣಿಕ ಸಾಲಿನ ಶಾಲೆಗಳನ್ನು ಆರಂಭಿಸಲು ಅಗತ್ಯ ಸಿದ್ಧತೆಗಳನ್ನು ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್ಇ) ನಿಧಾನವಾಗಿ ಆರಂಭಿಸಿದೆ. ಮೊದಲ ಹೆಜ್ಜೆಯಾಗಿ ತನ್ನ ವ್ಯಾಪ್ತಿಯಲ್ಲಿರುವ ದೇಶದ ಎಲ್ಲ ಶಾಲೆಗಳಿಗೆ ಹೊಸ ವಿದ್ಯಾರ್ಥಿಗಳು, ಮುಂದಿನ ತರಗತಿಗೆ ಹೋಗುತ್ತಿರುವ ವಿದ್ಯಾರ್ಥಿಗಳು ಸೇರಿದಂತೆ ಹೊಸ ಶೈಕ್ಷಣಿಕ ಸಾಲಿನ ವಿದ್ಯಾರ್ಥಿಗಳ ಪಟ್ಟಿ ಸಿದ್ಧಪಡಿಸಲು ಸೂಚಿಸಲಾಗಿದೆ.
ಶೀಘ್ರವೇ ಆನ್ಲೈನ್ ಪೋರ್ಟಲ್ವೊಂದನ್ನು ಶುರು ಮಾಡಲಿರುವ ಸಿಬಿಎಸ್ಇ, ಇದರಲ್ಲಿ ವಿದ್ಯಾರ್ಥಿಗಳ ಮಾಹಿತಿಯಲ್ಲಿ ನಮೂದಿಸಲು ಶಾಲೆಗಳಿಗೆ ಸೂಚನೆ ನೀಡುವ ನಿರೀಕ್ಷೆಯಿದೆ. ಈ ಬಗ್ಗೆ ಶಾಲೆಗಳಿಗೆ ಸಿಬಿಎಸ್ಇ ಪರೀಕ್ಷಾಂಗ ವಿಭಾಗದ ಮುಖ್ಯಸ್ಥರಾದ ಸಾನ್ಯಮ್ ಭಾರದ್ವಾಜ್ ಪತ್ರ ಕೂಡ ಬರೆದಿದ್ದಾರೆ ಎನ್ನಲಾಗಿದೆ.
2021-22ನೇ ಸಾಲಿಗೆ ಟರ್ಮ್ 1 ಮತ್ತು ಟರ್ಮ್ 2 ಎಂಬಂತೆ ಎರಡು ಬಾರಿ ಪರೀಕ್ಷೆ ನಡೆಸುವುದಾಗಿ ಈಗಾಗಲೇ ಸಿಬಿಎಸ್ಇ ಹೇಳಿದೆ. ಅದರಂತೆ ಕೊರೊನಾ ಸಾಂಕ್ರಾಮಿಕ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಕುಂದುಕೊರತೆ ಆಗದಂತೆ ನವೆಂಬರ್-ಡಿಸೆಂಬರ್ನಲ್ಲಿ ಮೊದಲ ಟರ್ಮ್ ಮತ್ತು 2022ರ ಮಾರ್ಚ್-ಏಪ್ರಿಲ್ನಲ್ಲಿ ಎರಡನೇ ಟರ್ಮ್ ಪರೀಕ್ಷೆಗಳು ನಡೆಯುವ ಸಾಧ್ಯತೆಯಿದೆ.