ಹೈದರಾಬಾದ್: ತೆಲಂಗಾಣದ ರಾಜಧಾನಿ ಹೈದರಾಬಾದ್ನಲ್ಲಿ ಇನ್ನು 10 ರಿಂದ 15 ದಿನಗಳಲ್ಲಿ ಶೇ. 100 ರಷ್ಟು ಕರೊನಾ ಲಸಿಕಾಕರಣ ಸಾಧಿಸಲಾಗುವುದು ಎಂದು ರಾಜ್ಯ ಸರ್ಕಾರ ಘೋಷಿಸಿದೆ. ಈ ನಿಟ್ಟಿನಲ್ಲಿ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ರಾಜ್ಯದ ಮುಖ್ಯ ಕಾರ್ಯದರ್ಶಿ ಸೋಮೇಶ್ ಕುಮಾರ್ ತಿಳಿಸಿದ್ದಾರೆ.
ಈ ಸಂಬಂಧವಾಗಿ ನಿನ್ನೆ ಹೈದರಾಬಾದ್ನಲ್ಲಿ ನಡೆದ ಕಾರ್ಯಾಗಾರದಲ್ಲಿ ಮಾತನಾಡಿದ ಸೋಮೇಶ್ ಕುಮಾರ್, ಹೈದರಾಬಾದ್ ನಗರಪಾಲಿಕೆ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗಿರುವ ಮೊಬೈಲ್ ಲಸಿಕಾ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ಲಭಿಸಿದೆ ಎಂದರು. ಆರೋಗ್ಯ ಇಲಾಖೆ ಮತ್ತು ಪಾಲಿಕೆ ಸಿಬ್ಬಂದಿಗಳಿಗೆ ಬಡಾವಣೆವಾರು ಮನೆಯಿಂದ ಮನೆಗೆ ಹೋಗಿ ಲಸಿಕೆಗೆ ಅರ್ಹರಾಗಿದ್ದು ಈವರೆಗೆ ಪಡೆದಿಲ್ಲದ 18 ವರ್ಷ ಮೇಲ್ಪಟ್ಟ ನಾಗರೀಕರನ್ನು ಗುರುತಿಸಿ, ಲಸಿಕೆ ನೀಡಬೇಕೆಂದು ಸೂಚಿಸಿದರು.
ಗ್ರೇಟರ್ ಹೈದರಾಬಾದ್ ಮುನಿಸಿಪಲ್ ಕಾರ್ಪೊರೇಷನ್ನಿಂದ ಕೈಗೊಳ್ಳಲಾಗಿರುವ ಮೊಬೈಲ್ ಲಸಿಕಾ ಅಭಿಯಾನದಡಿ 175 ಮೊಬೈಲ್ ಲಸಿಕಾಕರಣ ವಾಹನಗಳು ಕಾರ್ಯನಿರ್ವಹಿಸುತ್ತಿವೆ. ಇವು ತಂತಮ್ಮ ಕ್ಷೇತ್ರಗಳ ಅರ್ಹ ವಯೋಮಾನದ ಜನರಿಗೆ ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ರವರೆಗೆ ನಿಯಮಿತವಾಗಿ ಲಸಿಕೆ ನೀಡುವ ಕೆಲಸ ಮಾಡುತ್ತಿವೆ. ಇದಲ್ಲದೆ ಎಂದಿನ ಸರ್ಕಾರಿ ಲಸಿಕಾ ಕೇಂದ್ರಗಳಲ್ಲಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಕೂಡ ಲಸಿಕಾಕರಣ ಭರದಿಂದ ಸಾಗಿದೆ ಎನ್ನಲಾಗಿದೆ. (ಏಜೆನ್ಸೀಸ್)