ಬೆಂಗಳೂರು: ವಿಧಾನಸೌಧದ ವಜ್ರಮಹೋತ್ಸವದಿಂದ ಸರ್ಕಾರ ಅಂತರ ಕಾಯ್ದುಳ್ಳುತ್ತಿದೆ ಎಂಬ ಟೀಕೆಯಿಂದ ತಪ್ಪಿಸಿಕೊಳ್ಳಲು ಇಂದು ನಡೆಯಬೇಕಿದ್ದ ಸಚಿವ ಸಂಪುಟ ಸಭೆಯನ್ನ ನಾಳೆಗೆ ಮುಂದೂಡಿದೆ.
ವಜ್ರಮಹೋತ್ಸವ ಅಂಗವಾಗಿ ಸಂಜೆವರೆಗೆ ವಿವಿಧ ಕಾರ್ಯಕ್ರಮವಿದ್ದರೂ ಇಂದು ಸಂಜೆ 4 ಗಂಟೆಗೆ ಸಂಪುಟ ಸಭೆ ನಿಗದಿಯಾಗಿತ್ತು. ಕೂಡಲೇ ಎಚ್ಚೆತ್ತ ಸರ್ಕಾರ ಆರೋಪದಿಂದ ದೂರ ಸರಿಯಲು ಸಚಿವ ಸಂಪುಟ ಸಭೆಯನ್ನು ನಾಳೆ ಸಂಜೆ 4 ಗಂಟೆಗೆ ಮುಂದೂಡಿದೆ.
ವಿಧಾನಸೌಧ ವಜ್ರಮಹೋತ್ಸವ ಕಾರ್ಯಕ್ರಮ ಮಾಡುವ ಕುರಿತು ಘೋಷಣೆಯಾದಾಗಿನಿಂದಲೂ ಒಂದಿಲ್ಲೊಂದು ವಿವಾದ ಸೃಷ್ಟಿಯಾಗಿತ್ತು. ವಜ್ರಮಹೋತ್ಸವಕ್ಕೆ 27 ಕೋಟಿ ರೂ. ವೆಚ್ಚ ಮಾಡಲು ನಿರ್ಧರಿಸಿ, ನಂತರ 10 ಕೋಟಿ ರೂ.ಗೆ ಕಾರ್ಯಕ್ರಮ ಮಾಡಲು ತೀರ್ಮಾನಿಸಲಾಯಿತು. ಅಂದಿನಿಂದ ಸರ್ಕಾರ ವಜ್ರಮಹೋತ್ಸವದಿಂದ ಅಂತರ ಕಾಯ್ದುಕೊಂಡಿದೆ ಎಂದು ಹೇಳಲಾಗಿತ್ತು. ಹೀಗಾಗಿ ರಾಷ್ಟ್ರಪತಿ ಭಾಷಣ ಮುಗಿದ ಬಳಿಕ ವಿಧಾನಸೌಧದ ಕಾರ್ಯಚಟುವಟಿಕೆ ಎಂದಿನಂತೆ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಹಲವರು ಟೀಕೆ ಬಂದ ಹಿನ್ನೆಲೆಯಲ್ಲಿ ಸಂಪುಟ ಸಭೆಯನ್ನು ನಾಳೆಗೆ ಮುಂದೂಡಲಾಗಿದೆ ಎಂದು ಹೇಳಲಾಗುತ್ತಿದೆ.