ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ವಿಚಾರದಲ್ಲಿ ಮಧ್ಯಪ್ರವೇಶಿಸಿರುವ ಮಠಾಧೀಶರೇನು ಸೂ
ಪರ್ ಹೈಕಮಾಂಡಾ ಎಂದು ಮಾಜಿ ಸಚಿವ ಹಾಗೂ ಬಿಜೆಪಿಯ ಹಿರಿಯ ಮುಖಂಡ ಶ್ರೀನಿವಾಸ್ ಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚಾಮರಾಜನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿನ ಹೈಕಮಾಂಡ್ ಮತ್ತು ಬಿಎಸ್ ವೈ ನಡುವಿನ ವಿಚಾರದಲ್ಲಿ ಮೂರನೇಯವರು ಮಾತನಾಡಬಾರದು ಎಂದರು.
ಸ್ವಾಮೀಜಿಗಳು ಯಡಿಯೂರಪ್ಪ ಅವರೇ ಮುಂದುವರೆಯಬೇಕೆಂದು ಹೇಳುತ್ತಿದ್ದಾರೆ. ಸ್ವಾಮೀಜಿಗಳೇನು ಸೂಪರ್ ಹೈಕಮಾಂಡಾ? ಅವರು ಯಾಕೆ ಈ ವಿಷಯದಲ್ಲಿ ಮೂಗು ತೂರಿಸುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಹೈಕಮಾಂಡ್ ಜೊತೆಗಿನ ಒಪ್ಪಂದದಂತೆ ಬಿಎಸ್ ವೈ 2 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡುತ್ತಿದ್ದಾರೆ. 75 ವರ್ಷ ಮೇಲಿನ ವಯಸ್ಸಿನವರಿಗೆ ಆಯಕಟ್ಟಿನ ಹುದ್ದೆ ನೀಡಬಾರದೆಂಬ ಪಕ್ಷದ ನಿಲುವು. ಆದರೆ ಯಡಿಯೂರಪ್ಪ ಅವರಿಗಾಗಿ ಬದಲಿಸಿ ಸಿಎಂ ಸ್ಥಾನ ಕೊಟ್ಟಿದ್ದಾರೆ. ಎರಡು ವರ್ಷಗಳ ಬಳಿಕ ರಾಜೀನಾಮೆ ಕೊಡಬೇಕೆಂತಲೂ ಒಪ್ಪಂದ ಆಗಿತ್ತು ಎಂದು ಅವರು ಸ್ಪಷ್ಟಪಡಿಸಿದರು.
ಬಿಜೆಪಿ ಹೈಕಮಾಂಡ್ ಕೂಡ ಯಡಿಯೂರಪ್ಪ ಅವರನ್ನು ಬಹಳ ಗೌರವಯುತವಾಗಿ ನೋಡಿಕೊಂಡಿದೆ. ರಾಜೀನಾಮೆ ಕೊಡುವ ಬಗ್ಗೆ ಯಡಿಯೂರಪ್ಪ ಅವರೇ ಸ್ಪಷ್ಟವಾಗಿ ಹೇಳಿದ್ದಾರೆ.
ಯಡಿಯೂರಪ್ಪ ರಾಜೀನಾಮೆ ಸೇರಿದಂತೆ ಪಕ್ಷದಲ್ಲಿನ ಬೆಳವಣಿಗೆ ಕುರಿತು ಎಚ್. ವಿಶ್ವನಾಥ್ ಹೇಳಿಕೆಗಳಿಗೆ ಚಿಕ್ಕಾಸಿನ ಬೆಲೆಯಿಲ್ಲ. ನಾವು ಪಕ್ಷ ಕಟ್ಟಿದವರಲ್ಲ. ಬೇರೆ ಪಕ್ಷದಲ್ಲಿ ಅನ್ಯಾಯ ಆಯಿತೆಂದು ನಾನು, ವಿಶ್ವನಾಥ್ ಇಲ್ಲಿಗೆ ಬಂದವರು, ಪಕ್ಷ ಬಲಪಡಿಸುವ ಕೆಲಸ ಮಾಡಬೇಕೇ ಹೊರತು ಹೊರೆಯಾಗಬಾರದು. ತೆವಳಿಯ ಹೇಳಿಕೆ ಕೊಡಬಾರದು ಎಂದು ಶ್ರೀನಿವಾಸ್ ಪ್ರಸಾದ್ ಸಲಹೆ ನೀಡಿದರು.