ಬೆಂಗಳೂರು: ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್ ಪರಿಷ್ಕರಣೆ ಮಾಡಿದ್ದರಿಂದ ಸಾವಿರಾರು ಮಂದಿಯ ಬಿಪಿಎಲ್ ಕಾರ್ಡ್ ರಾತ್ರೋ ರಾತ್ರಿ ಎಪಿಎಲ್ ಕಾರ್ಡ್ ಆಗಿ ಪರಿವರ್ತನೆಯಾಗಿದೆ. ಈ ಬಗ್ಗೆ ಈಗ ಸಾರ್ವಜನಿಕರಿಂದ ಆಕ್ರೋಶ ಕೇಳಿಬಂದಿದೆ.
ರಾಜ್ಯ ಸರ್ಕಾರದ ನೂತನ ಮಾನದಂಡಗಳ ಪ್ರಕಾರ 1 ಲಕ್ಷ ಆದಾಯ ಮಿತಿ, ವಾಣಿಜ್ಯ ಬಳಕೆಗಾಗಿ ನಾಲ್ಕು ಚಕ್ರದ ವಾಹನ ಇರುವವರಿಗೆ, ತೆರಿಗೆ ಪಾವತಿಸುವವರಿಗೆ ಬಿಪಿಎಲ್ ಕಾರ್ಡ್ ರದ್ದು ಮಾಡಲಾಗಿದೆ. ಇದರಿಂದಾಗಿ ಎಷ್ಟೋ ಜನ ಬಿಪಿಎಲ್ ಕಾರ್ಡ್ ಅರ್ಹತೆ ಕಳೆದುಕೊಂಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ್ದ ಸಿಎಂ ಸಿದ್ದರಾಮಯ್ಯ, ತೆರಿಗೆ ಕಟ್ಟುವವರಿಗೆ ಯಾಕೆ ಬಿಪಿಎಲ್ ಕಾರ್ಡ್ ಕೊಡಬೇಕು? ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಸಾರ್ವಜನಿಕರಿಂದ ಆಕ್ರೋಶ ಕೇಳಿಬಂದಿದೆ. ತೆರಿಗೆ ಕಟ್ಟುವವರು ಎಲ್ಲರೂ ಶ್ರೀಮಂತರಲ್ಲ. ಇದರಲ್ಲಿ ಮಧ್ಯಮ ವರ್ಗದವರೂ ಹೆಚ್ಚಾಗಿ ಇದ್ದಾರೆ. ತೆರಿಗೆ ಕಟ್ಟುವವರ ತೆರಿಗೆ ದುಡ್ಡು ಬೇಕು, ಆದರೆ ಅವರಿಗೆ ಯಾವ ಸೌಲಭ್ಯವೂ ಕೊಡಲ್ಲ ಎಂದರೆ ಹೇಗೆ? ಅವರು ಮನುಷ್ಯರಲ್ವಾ?
ನಿಮ್ಮ ಗ್ಯಾರಂಟಿ ಜಾರಿಗೆ ಮುನ್ನವೇ ಬಿಪಿಎಲ್ ಕಾರ್ಡ್ ಪರಿಷ್ಕರಣೆ ಮಾಡಿದ್ದರೆ ನಿಮ್ಮ ನಿರ್ಧಾರವನ್ನು ಒಪ್ಪಬಹುದಿತ್ತು. ಆದರೆ ಇಷ್ಟು ದಿನದ ಬಳಿಕ ಪರಿಷ್ಕರಣೆ ಮಾಡಿರುವುದು ನೋಡಿದರೆ ಈಗ ಗ್ಯಾರಂಟಿ ಯೋಜನೆಗೆ ಹಣದ ಕೊರತೆಯಾಗಿದೆ ಎಂದೇ ಅರ್ಥ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.