ಬೆಂಗಳೂರು: ಸರ್ಕಾರದ ವಿರುದ್ಧ ಸಾರಿಗೆ ನೌಕರರು ಸಿಡಿದೆದ್ದು ಮುಷ್ಕರ ಮಾಡಿದ್ದರಿಂದ ಬಿಎಂಟಿಸಿ ಮತ್ತು ಕೆಎಸ್ ಆರ್ ಟಿಸಿ ಕೋಟ್ಯಾಂತರ ರೂಪಾಯಿ ನಷ್ಟ ಅನುಭವಿಸಿದೆ.
ಕಳೆದ ಎರಡು ದಿನದಿಂದ ಸರಿಯಾಗಿ ಬಸ್ ಸಂಚಾರವಾಗುತ್ತಿಲ್ಲ. ಇದರಿಂದಾಗಿ ಕೆಎಸ್ ಆರ್ ಟಿಸಿಗೆ 13 ಕೋಟಿ ರೂ. ಮತ್ತು ಬಿಎಂಟಿಸಿಗೆ 7 ಕೋಟಿ ರೂ. ನಷ್ಟವಾಗಿದೆ. ಇಂದು ಪೊಲೀಸ್ ಭದ್ರತೆಯಲ್ಲಿ 50 ಕ್ಕೂ ಹೆಚ್ಚು ಬಸ್ ಗಳು ನಗರದಲ್ಲಿ ಸಂಚಾರ ನಡೆಸಿವೆ. ಬಸ್ ಸಂಚಾರವಿಲ್ಲದೇ ಸಾರ್ವಜನಿಕರು ತೀವ್ರವಾಗಿ ಪರದಾಡುತ್ತಿದ್ದಾರೆ. ಈ ನಡುವೆ ನಿನ್ನೆ ಸರ್ಕಾರಿ ಬಸ್ ನೌಕರರು ಕರ್ತವ್ಯಕ್ಕೆ ಹಾಜರಾಗದಿದ್ದರೆ ಖಾಸಗಿ ಬಸ್ ಗಳನ್ನು ಬಿಡುವ ಎಚ್ಚರಿಕೆ ನೀಡಿದ್ದ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಇಂದು ಕೊಂಚ ಮೃದು ಧೋರಣೆ ತಳೆದಿದ್ದು, ಬಸ್ ನೌಕರರು ನಮ್ಮ ಕುಟುಂಬ ಸದಸ್ಯರಿದ್ದಂತೆ. ಸದ್ಯಕ್ಕೆ ಅವರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಲು ಸಾಧ್ಯವಿಲ್ಲ. ಆದರೆ ಇಂದಿನಿಂದ ಅವರು ಮತ್ತೆ ಕರ್ತವ್ಯಕ್ಕೆ ಹಾಜರಾಗಲು ಮನವೊಲಿಕೆ ಮಾಡಲಾಗುವುದು ಎಂದಿದ್ದಾರೆ.