Publish Date: Tue, 28 Apr 2026 (20:12 IST)
Updated Date: Tue, 28 Apr 2026 (20:16 IST)
ಬೆಂಗಳೂರು: 2020 ರ ದೆಹಲಿ ದಂಗೆ ಪ್ರಕರಣದಲ್ಲಿ ಯುಎಪಿಎ ಕಾಯ್ದೆಯಡಿ ತಿಹಾರ್ ಜೈಲಿನಲ್ಲಿರುವ ಉಗ್ರ ಉಮರ್ ಖಾಲಿದ್ ಕುರಿತ ಪುಸ್ತಕ ಬಿಡುಗಡೆಗೆ ರಾಜ್ಯ ಸರ್ಕಾರ ಅವಕಾಶ ನೀಡಿದ್ದನ್ನು ವಿರೋಧಿಸಿ ಬಿಜೆಪಿ ರಾಜ್ಯ ಯುವ ಮೋರ್ಚಾ ವತಿಯಿಂದ ಇಂದು ದೊಮ್ಮಲೂರಿನ ಬೆಂಗಳೂರು ಇಂಟರ್ ನ್ಯಾಷನಲ್ ಸೆಂಟರ್ ಬಳಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾನಿರತರನ್ನು ಪೊಲೀಸರು ಬಂಧಿಸಿದರು.
ಕಾರ್ಯಕ್ರಮಕ್ಕೆ ಅನುಮತಿ ನೀಡದಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಮನವಿ ನಿನ್ನೆ ಮಾಡಲಾಗಿತ್ತು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಪಿ.ಸಿ ಮೋಹನ್ ಅವರು, ದೇಶದ್ರೋಹಿ ಉಮರ್ ಖಾಲಿದ್ 2020 ರ ದೆಹಲಿ ದಂಗೆಯ ಪ್ರಮುಖ ಆಪಾದಿತ. ಅಂದು ನಡೆದ ಸ್ಫೋಟದಲ್ಲಿ ಸಾಕಷ್ಟು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಆಸ್ತಿ-ಪಾಸ್ತಿಗೆ ಹಾನಿಯಾಗಿದೆ. ಇಂದಿಗೂ ಜೈಲುಶಿಕ್ಷೆ ಅನುಭವಿಸುತ್ತಿರುವ ಆರೋಪಿಯನ್ನು ವೈಭವೀಕರಿಸುವ ಅಗತ್ಯವೇನು? ಎಂದು ಪ್ರಶ್ನಿಸಿದ್ದರು.
ದೊಮ್ಮಲೂರಿನ ಬೆಂಗಳೂರು ಇಂಟರ್ ನ್ಯಾಷನಲ್ ಸೆಂಟರ್‍ನಲ್ಲಿ ಹಮ್ಮಿಕೊಂಡಿರುವ ಪುಸ್ತಕ ಬಿಡುಗಡೆಗೆ ಅವಕಾಶ ಕೊಡಬಾರದು. ಈ ಕಾರ್ಯಕ್ರಮ ನಡೆಯಬಾರದು. ಈ ಸಂಬಂಧ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದ್ದೇವೆ ಎಂದು ವಿವರಿಸಿದ್ದರು.
ಇಂತಹ ಕಾರ್ಯಕ್ರಮ ಆಯೋಜಕರು ದೇಶದ್ರೋಹಿಗಳಾದ ಕಸಾಬ್, ಸಂಸತ್ತಿನ ದಾಳಿಕೋರರನ್ನು ವೈಭವೀಕರಿಸುವ ಕೆಲಸ ಮಾಡುತ್ತಿದ್ದಾರೆ. ಬೇರೆ ರಾಜ್ಯಗಳಲ್ಲಿ ಇಂತಹ ಕಾರ್ಯಕ್ರಮಕ್ಕೆ ಅನುಮತಿ ಸಿಗುವುದಿಲ್ಲ. ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದರಿಂದ ಇಂತಹ ಭಯೋತ್ಪಾದಕರ ಬಗ್ಗೆ ಸರ್ಕಾರ ಮೃದುಧೋರಣೆ ಹೊಂದಿದೆ. ಆದ್ದರಿಂದಲೇ ಇಲ್ಲಿ ಕಾರ್ಯಕ್ರಮ ಆಯೋಜನೆಯಾಗಿದೆ ಎಂದು ಆಕ್ಷೇಪಿಸಿದ್ದರು.
ದೇಶದ್ರೋಹಿಗಳನ್ನು ವೈಭವೀಕರಿಸಲು ಕಾಂಗ್ರೆಸ್ ಸರ್ಕಾರ ಬೆಂಬಲ ನೀಡುತ್ತದೆ. ಗಾಂಧಿನಗರದ ಗೋಡೆಗಳ ಮೇಲೆ ಬರಹಗಳನ್ನು ಬರೆದಿದ್ದಾರೆ. ಈ ಸರ್ಕಾರ ಇಂತಹುದಕ್ಕೆಲ್ಲ ಅವಕಾಶ ನೀಡಬಾರದು. ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದರು.
ವಿಧಾನ ಪರಿಷತ್ತಿನಲ್ಲಿನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಅವರು ಸುದ್ದಿಗಾರರ ಜೊತೆ ಮಾತನಾಡಿ, ದೆಹಲಿ ಗಲಭೆ ಪ್ರಕರಣದಲ್ಲಿ ಯುಎಪಿಎ ಅಡಿಯಲ್ಲಿ ಬಂಧಿತನಾಗಿರುವ ಉಮರ್ ಖಾಲಿದ್ ಹಾಗೂ ಶಾರ್ಜಿಲ್ ಇಮಾಮ್ ಕುರಿತ ಪುಸ್ತಕ ಬಿಡುಗಡೆಗೆ ಭಾರತೀಯ ಜನತಾ ಪಾರ್ಟಿ ವಿರೋಧವಿದೆ. ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಇದಕ್ಕೆ ಅವಕಾಶ ಕೊಡಬಾರದು ಎಂದು ಆಗ್ರಹಿಸಿದ್ದರು.
ಭಯೋತ್ಪಾದಕರ ಕುರಿತು ಪುಸ್ತಕ ಬಿಡುಗಡೆಗೆ ಸಿದ್ಧತೆ ನಡೆದಿದೆ. 2020ರ ಫೆಬ್ರವರಿಯಲ್ಲಿ ನಡೆದ ದೆಹಲಿ ಗಲಭೆ ಸಂಬಂಧ ಸುಪ್ರೀಂ ಕೋರ್ಟ್ ಇವರಿಬ್ಬರ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಶಾರ್ಜೀಲ್ ಇಮಾಮ್ ನನ್ನು ಸಿಎಎ ಮತ್ತು ಎನ್‍ಆರ್‍ಸಿ ವಿರೋಧಿ ಪ್ರತಿಭಟನೆಗಳ ಸಂದರ್ಭದಲ್ಲಿ ಮಾಡಿದ ಭಾಷಣಗಳಿಗಾಗಿ ಬಂಧಿಸಲಾಗಿದೆ. ಎನ್‍ಆರ್‍ಸಿ ಮತ್ತು ಸಿಎಎ ವಿರುದ್ಧ ಹೋರಾಟದ ಸಂದರ್ಭ ಬಾಂಬ್ ಸ್ಫೋಟದಲ್ಲಿ 53 ಜನರ ಹತ್ಯೆಯಾಗಿತ್ತು. ಸುಮಾರು 700 ಜನರು ಗಾಯಗೊಂಡಿದ್ದರು. ಈಗ ಇವರ ಬಗ್ಗೆಯೇ ಪುಸ್ತಕ ಬಿಡುಗಡೆ ಮಾಡಲಾಗುತ್ತಿದೆ ಎಂದು ಅವರು ಆಕ್ಷೇಪಿಸಿದ್ದರು. ಇವರಿಬ್ಬರ ಜೊತೆಗೆ 18 ಜನರನ್ನು ಬಂಧಿಸಲಾಗಿತ್ತು. 11 ಜನರಿಗೆ ಜಾಮೀನು ಸಿಕ್ಕಿದೆ. ಇನ್ನೂ 7 ಆರೋಪಿಗಳಿಗೆ ಜಾಮೀನು ಸಿಕ್ಕಿಲ್ಲ. ಇಂತಹ ಭಯೋತ್ಪಾದಕ ಹಾಗೂ ದೇಶದ್ರೋಹಿಗಳನ್ನು ಕುರಿತ ಪುಸ್ತಕ ಬಿಡುಗಡೆ ಮಾಡುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದ್ದರು.
ಬಿಜೆಪಿ ಕರ್ನಾಟಕ- ಮಾಧ್ಯಮ ವಿಭಾಗ
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ