Publish Date: Mon, 27 Apr 2026 (17:37 IST)
Updated Date: Mon, 27 Apr 2026 (17:40 IST)
ಬೆಂಗಳೂರು: ದೆಹಲಿ ಗಲಭೆ ಪ್ರಕರಣದಲ್ಲಿ ಯುಎಪಿಎ ಅಡಿಯಲ್ಲಿ ಬಂಧಿತನಾಗಿರುವ ಉಮರ್ ಖಾಲಿದ್ ಹಾಗೂ ಶಾರ್ಜಿಲ್ ಇಮಾಮ್ ಕುರಿತ ಪುಸ್ತಕ ಬಿಡುಗಡೆಗೆ ಭಾರತೀಯ ಜನತಾ ಪಾರ್ಟಿ ವಿರೋಧವಿದೆ. ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಇದಕ್ಕೆ ಅವಕಾಶ ಕೊಡಬಾರದು. ಒಂದು ವೇಳೆ ಅವಕಾಶ ನೀಡಿದರೆ ಬಿಜೆಪಿ ಖಂಡಿಸಲಿದೆ ಎಂದು ವಿಧಾನ ಪರಿಷತ್ತಿನಲ್ಲಿನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್ ರವಿಕುಮಾರ್ ಹೇಳಿದ್ದಾರೆ.
ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಯೋತ್ಪಾದಕರ ಕುರಿತು ಪುಸ್ತಕ ಬಿಡುಗಡೆಗೆ ಸಿದ್ಧತೆ ನಡೆದಿದೆ. 2020ರ ಫೆಬ್ರವರಿಯಲ್ಲಿ ನಡೆದ ದೆಹಲಿ ಗಲಭೆ ಸಂಬಂಧ ಸುಪ್ರೀಂ ಕೋರ್ಟ್ ಇವರಿಬ್ಬರ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಶಾರ್ಜೀಲ್ ಇಮಾಮ್ ನನ್ನು ಸಿಎಎ ಮತ್ತು ಎನ್‍ಆರ್‍ಸಿ ವಿರೋಧಿ ಪ್ರತಿಭಟನೆಗಳ ಸಂದರ್ಭದಲ್ಲಿ ಮಾಡಿದ ಭಾಷಣಗಳಿಗಾಗಿ ಬಂಧಿಸಲಾಗಿದೆ. ಎನ್ ಆರ್‍ಸಿ ಮತ್ತು ಸಿಎಎ ವಿರುದ್ಧ ಹೋರಾಟದ ಸಂದರ್ಭ ಬಾಂಬ್ ಸ್ಫೋಟದಲ್ಲಿ
53 ಜನರ ಹತ್ಯೆಯಾಗಿತ್ತು. ಸುಮಾರು 700 ಜನರು ಗಾಯಗೊಂಡಿದ್ದರು. ಈಗ ಇವರ ಬಗ್ಗೆಯೇ ಪುಸ್ತಕ ಬಿಡುಗಡೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಇವರಿಬ್ಬರ ಜೊತೆಗೆ 18 ಜನರನ್ನು ಬಂಧಿಸಲಾಗಿತ್ತು. 11 ಜನರಿಗೆ ಜಾಮೀನು ಸಿಕ್ಕಿದೆ. ಇನ್ನೂ 7 ಆರೋಪಿಗಳಿಗೆ ಜಾಮೀನು ಸಿಕ್ಕಿಲ್ಲ. ಇಂತಹ ಭಯೋತ್ಪಾದಕ ಹಾಗೂ ದೇಶದ್ರೋಹಿಗಳನ್ನು ಕುರಿತ ಪುಸ್ತಕ ಬಿಡುಗಡೆ ಮಾಡುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದರು.
ಬೆಂಗಳೂರು ಇಂಟರ್ ನ್ಯಾಷನಲ್ ಸೆಂಟರ್‍ನಲ್ಲಿ ನಡೆಯುತ್ತಿರುವ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ನಟ ಪ್ರಕಾಶ್ ರೈ, ಇತಿಹಾಸಕಾರರಾದ ರಾಮಚಂದ್ರಗುಹಾ ಹಾಗೂ ಜಾನಕಿ ನಾಯರ್ ಅವರು ಭಾಗವಹಿಸುತ್ತಿದ್ದಾರೆ. ಇದಕ್ಕೆ ಯಾವುದೇ ರೀತಿ ಅವಕಾಶ ಸಿಗಬಾರದು. ಸರ್ಕಾರ ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ