ಪದವೀಧರ ಕ್ಷೇತ್ರದಿಂದ ಇದೇ ಮೊದಲ ಬಾರಿ ಕಾಂಗ್ರೆಸ್ ಪಕ್ಷ ಗೆದ್ದಿದ್ದು, ಬಿಜೆಪಿ ಮತ್ತು ಜೆಡಿಎಸ್ ಭದ್ರಕೋಟೆಯಲ್ಲೇ ಗೆದ್ದಿದ್ದೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಅಭ್ಯರ್ಥಿ ಮಧು ಜಿ ಮಾದೇಗೌಡ ಸುಮಾರು 12,205 ಮತಗಳ ಅಂತರದಿಂದ ಪದವೀಧರ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ ಎಂದರು.
ನಮ್ಮ ಸಮೀಪ ಅಭ್ಯರ್ಥಿ ಎಂವಿ ರವಿಶಂಕರ್ ಅವರಿಗೆ 33,848, ನಮ್ಮ ಅಭ್ಯರ್ಥಿಗೆ 46,073 ಮತಗಳು ಬಂದಿವೆ. ಜೆಡಿಎಸ್ ಗೆ 19,630 ಮತ ಬಂದಿದೆ. ಎರಡು ಬಾರಿ ಶ್ರೀಕಂಠೇಗೌಡ ಅವರು ಗೆದ್ದಿದ್ದರು. ಈ ಬಾರಿ ರಾಮು ಅವರಿಗೆ ಜೆಡಿಎಸ್ ಟಿಕೆಟ್ ನೀಡಿತ್ತು. ಬಹುಶಃ ಸೋಲಿನ ಭಯದಿಂದ ಶ್ರೀಕಂಠೇಗೌಡರು ಸ್ಪರ್ಧಿಸಿರಲಿಲ್ಲ ಎಂದು ಕಾಣುತ್ತೆ ಎಂದು ಅವರು ಹೇಳಿದರು,
ನಮ್ಮ ಪಕ್ಷದ ಅಭ್ಯರ್ಥಿಗಳು ಶಿಕ್ಷಕರ ಕ್ಷೇತ್ರದಿಂದ ಗೆದ್ದಿದ್ದರು ಆದರೆ ಯಾವತ್ತೂ ದಕ್ಷಿಣ ಪದವೀಧರ ಕ್ಷೇತ್ರದಿಂದ ಗೆದ್ದಿರಲಿಲ್ಲ. ಮೊಟ್ಟಮೊದಲ ಬಾರಿಗೆ ಕಾಂಗ್ರೆಸ್ ಅಭ್ಯರ್ಥಿ ಈ ಬಾರಿ ಪದವೀಧರ ಕ್ಷೇತ್ರದಿಂದ ಗೆದ್ದಿದ್ದಾರೆ. ಜೆಡಿಎಸ್ ನವರು ಮತ್ತು ಬಿಜೆಪಿ ಅವರು ಇದನ್ನು ನಮ್ಮ ಭದ್ರಕೋಟೆ ಎಂದು ಹೇಳುತ್ತಿದ್ದರು. ಇಂಥಾ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಅಭ್ಯರ್ಥಿ ಮಧು ಮಾದೇಗೌಡ ಅವರು ಗೆದ್ದಿದ್ದಾರೆ. ಅವರಿಗೆ ನಾನು ಅಭಿನಂದನೆಗಳನ್ನು ಹೇಳಲು ಬಯಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.
ನಮ್ಮ ಅಭ್ಯರ್ಥಿಗೆ ಮತ ನೀಡಿದ ಪದವೀಧರ ಮತದಾರರಿಗೆ ಧನ್ಯವಾದಗಳು. 1 ಲಕ್ಷ 33 ಸಾವಿರ ಪದವೀಧರ ಮತದಾರರಿದ್ದರು. ನಮ್ಮ ಅಭ್ಯರ್ಥಿ ಇವರ ಮನ ಗೆಲ್ಲಲು ಯಶಸ್ವಿಯಾಗಿದ್ದಾರೆ. ನಮ್ಮ ಅಭ್ಯರ್ಥಿಯ ಗೆಲುವಿಗೆ ಸಂಘಟಿತ ಹೋರಾಟ ಕಾರಣ. ಎಂದು ಅವರು ನುಡಿದರು
ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಜಿಲ್ಲೆಗಳ ಪದವೀಧರ ಮತದಾರರು ಮತ ಚಲಾಯಿಸಿದ್ದಾರೆ. ಈ ನಾಲ್ಕು ಜಿಲ್ಲೆಗಳ ಕಾರ್ಯಕರ್ತರು, ಪಕ್ಷದ ಅಧ್ಯಕ್ಷರುಗಳು, ಮಾಜಿ ಸಂಸದರು, ಶಾಸಕರು ಇವರೆಲ್ಲರ ಸಂಘಟಿತ ಹೋರಾಟದ ಮೂಲಕ ಚುನಾವಣೆ ಗೆದ್ದಿದ್ದೇವೆ ಎಂದು ಅವರು ಹೇಳಿದರು.
ಕಳೆದ ಎರಡು ಬಾರಿ ಅಲ್ಲಿ ಬಿಜೆಪಿ ಅಭ್ಯರ್ಥಿ ಅರುಣ್ ಶಹಾಪುರ್ ಅವರು ಗೆದ್ದಿದ್ದರು. ನಮ್ಮ ಅಭ್ಯರ್ಥಿಗೆ ಮತ ನೀಡಿ ಗೆಲ್ಲಿಸಿದ ಬೆಳಗಾವಿ, ಬಿಜಾಪುರ, ಬಾಗಲಕೋಟೆ ಜಿಲ್ಲೆಗಳ ಎಲ್ಲಾ ಶಿಕ್ಷಕ ಬಂಧುಗಳಿಗೆ, ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಧನ್ಯವಾದಗಳು ಎಂದು ಅವರು ಹೇಳಿದರು.
ಉಳಿದ ಇನ್ನೆರಡು ಕ್ಷೇತ್ರಗಳಲ್ಲಿ ಸೋತಿದ್ದೇವೆ. ನಾವು ಈ ಮೊದಲು ನಾಲ್ಕೂ ಸ್ಥಾನಗಳಲ್ಲೂ ಇರಲಿಲ್ಲ. ಬಸವರಾಜ್ ಗುರಿಕಾರ್ ಅವರಿಗೆ ಸುಮಾರು 4,597 ಮತಗಳನ್ನು ಹಾಗೂ ಸುನೀಲ್ ಸಂಕ ಅವರಿಗೆ 10,122 ಮತಗಳನ್ನು ನೀಡಿದ್ದಾರೆ. ಇಲ್ಲಿ ನಮ್ಮ ಅಭ್ಯರ್ಥಿಗಳು ಸೋತಿದ್ದರೂ, ಇಷ್ಟು ಮತಗಳನ್ನು ನೀಡಿದ್ದಕ್ಕಾಗಿ ಮತದಾರರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಅವರು ಅಭಿನಂದಿಸಿದರು.