ಬೆಂಗಳೂರು: ರಾಜ್ಯದಲ್ಲಿ ಜಾತಿಗಣತಿ ಮಾಡಲು ಹೇಳಿದ್ದು ರಾಹುಲ್ ಗಾಂಧಿ. ಹೀಗಾಗಿ ಇದನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಸಚಿವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಮೊನ್ನೆಯಷ್ಟೇ ಸಿಎಂ ನೇತೃತ್ವದಲ್ಲಿ ನಡೆದಿದ್ದ ಕ್ಯಾಬಿನೆಟ್ ಸಭೆಯಲ್ಲಿ ಸಚಿವರು ಜಾತಿಗಣತಿ ಮುಂದೂಡಿ ಇಲ್ಲದೇ ಹೋದರೆ ನಮಗೇ ತೊಂದರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಜಾತಿಗಣತಿ ಕಾಲಂನಲ್ಲಿ ಸೃಷ್ಟಿಸಲಾಗಿರುವ ಹೊಸ ಜಾತಿಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಸಚಿವರ ಭಿನ್ನಮತದಿಂದ ಸ್ವತಃ ಸಿಎಂ ಸಿದ್ದರಾಮಯ್ಯ ಶಾಕ್ ಆಗಿದ್ದರು.
ಇದೀಗ ಸಚಿವರನ್ನು ಸಮಾಧಾನಪಡಿಸುವ ಹೊಣೆಯನ್ನು ರಣದೀಪ್ ಸುರ್ಜೇವಾಲ ತೆಗೆದುಕೊಂಡಿದ್ದಾರೆ. ಜಾತಿಗಣತಿ ಮಾಡಬೇಕೆಂಬುದು ರಾಹುಲ್ ಗಾಂಧಿ ಆದೇಶ ಮತ್ತು ಅವರ ಕನಸು. ಹೀಗಾಗಿ ಅದನ್ನು ಹಿಂಪಡೆಯಲಾಗದು ಎಂದು ಸಚಿವರಿಗೆ ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದಾರೆ.
ಹೀಗಾಗಿ ಈಗ ನಿಗದಿಯಾದಂತೇ ಜಾತಿ ಗಣತಿ ನಡೆಯಲಿದೆ. ಆದರೆ ಹೊಸದಾಗಿ ಸೃಷ್ಟಿಸಲಾಗಿರುವ 46 ಹೊಸ ಜಾತಿಗಳಿಗೆ ಕೊಕ್ ನೀಡಲು ಮುಂದಾಗಿದೆ. ಗೊಂದಲ ಮೂಡಿಸುವ ಅಂಶಗಳಿಗೆ ಕತ್ತರಿ ಹಾಕುವ ಭರವಸೆ ನೀಡಲಾಗಿದೆ.