ಬೆಂಗಳೂರು: ರಾಜ್ಯ ಸರ್ಕಾರ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ಪ್ರಮುಖ ದೇವಾಲಯಗಳ ಸೇವಾ ಶುಲ್ಕ ಹೆಚ್ಚು ಮಾಡಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನೀಗ ಕಟೀಲಮ್ಮನಿಗೆ ಬಡವರು ಹೂವಿನ ಮಾಲೆಯನ್ನೂ ಆರ್ಪಿಸಲು ಕಷ್ಟವಾಗಿದೆ.
ಕಟೀಲು ದುರ್ಗಾ ಪರಮೇಶ್ವರಿ, ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ರಾಜ್ಯದ ಬಹುತೇಕ ದೇವಾಲಯಗಳ ಸೇವಾ ಶುಲ್ಕದಲ್ಲಿ 100 ರಿಂದ 200 ರೂ. ಏರಿಕೆಯಾಗಿದೆ. ಅಕ್ಟೋಬರ್ 1 ರಿಂದಲೇ ಈ ಹೊಸ ದರ ಜಾರಿಗೆ ಬರಲಿದೆ. ದಸರಾ ಸಂದರ್ಭದಲ್ಲಿ ಸಾಕಷ್ಟು ಮಂದಿ ದೇವಾಲಯಗಳಿಗೆ ಭೇಟಿ ನೀಡಿ ಸೇವೆ ಸಲ್ಲಿಸುತ್ತಾರೆ. ಆದರೆ ಈ ಸಂದರ್ಭದಲ್ಲಿಯೇ ಸರ್ಕಾರ ಹಿಂದೂ ಭಕ್ತರಿಗೆ ಶಾಕ್ ನೀಡಿದೆ.
ಉದಾಹರಣೆಗೆ ಕಟೀಲಿನಲ್ಲಿ ಹೂವಿನ ಪೂಜೆ ಭಾರೀ ಫೇಮಸ್. ಇದುವರೆಗೆ ಹೂವಿನ ಪೂಜೆ ಸೇವೆ 120 ರೂ. ಶುಲ್ಕವಿತ್ತು. ಆದರೆ ಈಗ ಏಕಾಏಕಿ ಬರೋಬ್ಬರಿ 100 ರೂ. ಏರಿಕೆ ಮಾಡಲಾಗಿದ್ದು 220 ರೂ.ಗೆ ಬಂದು ತಲುಪಿದೆ! ಕುಕ್ಕೆ ಸುಬ್ರಹ್ಮಣ್ಯದಲ್ಲಿ ಆಶ್ಲೇಷ ಪೂಜೆ ಸೇವೆ 400 ರೂ.ಗಳಿದ್ದಿದ್ದು 500 ರೂ.ಗೆ ಏರಿಕೆಯಾಗಿದೆ.
ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಹಿಂದೂಗಳಿಂದ ಸೇವೆ ಮಾಡಿಸುವುದೇ ಬೇಡ ಎಂಬ ಅಭಿಯಾನ ಶುರುವಾಗಿದೆ. ಶುಲ್ಕ ನೀಡಿ ಸೇವೆ ಮಾಡಿಸುವ ಬದಲು ಇನ್ನು ಮುಂದೆ ಕಟೀಲಮ್ಮನಿಗೆ ಪ್ರಿಯವಾದ ಸೀಯಾಳ, ಮಲ್ಲಿಗೆ ಹೂವು ಸಮರ್ಪಿಸೋಣ ಎಂದು ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ ಶುರು ಮಾಡಲಾಗಿದೆ.