ಅಂತ್ಯ ಕ್ರಿಯೆಗಾಗಿ ತೆರಳಿದ್ದ ಜನರು ಸ್ಮಶಾನದಲ್ಲಿ ಪೊಲೀಸರ ಜೊತೆಗೆ ಬಿಗ್ ಫೈಟ್ ನಡೆಸಿರೋ ಘಟನೆ ನಡೆದಿದೆ.
ಪೊಲೀಸರು ಮತ್ತು ಗ್ರಾಮಸ್ಥರ ನಡುವೆ ವಾಗ್ವಾದ ನಡೆದಿದ್ದು, ಶವವನ್ನ ಹೊತ್ತುಕೊಂಡೇ ಪೊಲೀಸರ ಜೊತೆ ಫೈಟ್ ಮಾಡುತ್ತಲೇ ಶವ ಸಂಸ್ಕಾರ ಮಾಡಿದ ಘಟನೆ ನಡೆದಿದೆ.
ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ತುರಕಲ್ ದೊಡ್ಡಿ ಗ್ರಾಮದಲ್ಲಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಗ್ರಾಮದ ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ರು, ಹೀಗಾಗಿ ಎಂದಿನಂತೆ ಹಿಂದಿನಿಂದ ಇದ್ದ ಸ್ಮಶಾನ ಸ್ಥಳದಲ್ಲಿ ಅಂತ್ಯಕ್ರಿಯೆಗಾಗಿ ಗ್ರಾಮಸ್ಥರು ಸಿದ್ಧತೆ ನಡೆಸಿದ್ರು.
ಇದಕ್ಕೆ ಏಕಾಏಕಿ ಬಂದು ಅಡ್ಡಗಟ್ಟಿದ್ದಾರೆ ಪೊಲೀಸರು. ಈ ಜಾಗದಲ್ಲಿ ಶವ ಸಂಸ್ಕಾರ ಮಾಡಲು ಅವಕಾಶವಿಲ್ಲ, ಇಲ್ಲಿ ಶವ ಸಂಸ್ಕಾರ ಮಾಡದಂತೆ ವ್ಯಕ್ತಿಯೊಬ್ಬರು ಕೋರ್ಟ್ ನಿಂದ ಸ್ಟೇ ತಂದಿದ್ದಾರೆ ಎಂದಿದ್ದಾರೆ. ಆಗ ಪೊಲೀಸರು ವಿಷಯ ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಈ ವಿಚಾರಕ್ಕೆ ಗ್ರಾಮಸ್ಥರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದಿದೆ.
ಘಟನೆ ತೀವ್ರ ಸ್ವರೂಪ ಪಡೆದಿದ್ದರಿಂದ ಸ್ಮಶಾನಕ್ಕೆ ಎಂದೂ ಬಾರದ ಮುಸ್ಲಿಂ ಮಹಿಳೆಯರು ಸ್ಮಶಾನಕ್ಕೆ ಬಂದು, ತಾವೇ ಗುಂಡಿ ತೋಡಿ ಶವ ಸಂಸ್ಕಾರ ಮಾಡಿದ್ದಾರೆ. ಶವಸಂಸ್ಕಾರದ ವೇಳೆ ಪೊಲೀಸರು ಮತ್ತು ಗ್ರಾಮಸ್ಥರ ನಡುವೆ ತಳ್ಳಾಟ ಜೋರಾಗಿಯೇ ನಡೆದಿದೆ. ಸೈದಾಪುರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.