ಬೆಂಗಳೂರಿನಲ್ಲಿ ಮಹಾಮಾರಿ ಕೊರೋನಾ ತಹಬದಿಗೆ ಬಂದಿದ್ದು, ನಿರ್ಬಂಧಗಳನ್ನು ಸಡಿಲಗೊಳಿಸಿದ ಬೆನ್ನಲ್ಲೇ ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಐತಿಹಾಸಿಕ ಬೆಂಗಳೂರು ಕರಗ ಉತ್ಸವಕ್ಕೆ ಬಿಬಿಎಂಬಿ ಗ್ರೀನ್ ಸಿಗ್ನಲ್ ನೀಡಿದೆ.
ಬೆಂಗಳೂರು ಕರಗ ಉತ್ಸವಕ್ಕೆ ಪಾಲಿಕೆ ಅಧಿಕಾರಿಗಳು ಷರತ್ತು ಬದ್ಧ ಅನುಮತಿ ನೀಡಿದ್ದು, ಇದೇ ಮಾರ್ಚ್ 8 ರಂದು ದ್ರೌಪದಮ್ಮ ಕರಗ ಉತ್ಸವ ನಡೆಯಲಿದೆ.
ನಗರದಲ್ಲಿ ಕೊರೋನಾ ಇಳಿಕೆಯಾದ ಹಿನ್ನೆಲೆಯಲ್ಲಿ ಈ ಬಾರಿಯಾದರೂ ಉತ್ಸವಕ್ಕೆ ಅನುಮತಿ ನೀಡುವಂತೆ ಕರಗ ಉತ್ಸವ ಸಮಿತಿಯ ಅಧ್ಯಕ್ಷ ಪಿ.ಆರ್.ರಮೇಶ್ ಅವರು ಈ ಹಿಂದೆ ಸರ್ಕಾರಕ್ಕೆ ಹಾಗೂ ಬಿಬಿಎಂಪಿ ಅಧಿಕಾರಿಗಳಿಗೆ ಪತ್ರ ಬರೆದಿದ್ದರು. ಈ ಮನವಿಗೆ ಸ್ಪಂದಿಸಿರುವ ಪಾಲಿಕೆ ಅಧಿಕಾರಿಗಳು, ಕರಗ ಸಮಿತಿಗೆ ಮೌಖಿಕವಾಗಿ ಒಪ್ಪಿಗೆ ನೀಡಿದೆ.
ಬಿಬಿಎಂಪಿ ಮೌಖಿಕವಾಗಿ ಒಪ್ಪಿಗೆ ನೀಡಿರುವ ಹಿನ್ನೆಲೆಯಲ್ಲಿ ನಗರದ ತಿಗಳರ ಪೇಟೆಯಲ್ಲಿರುವ ಧರ್ಮರಾಯಸ್ವಾಮಿ ದ್ರೌಪದಮ್ಮ ದೇವಸ್ಥಾನದಲ್ಲಿ ಸಿದ್ಧತೆಗಳು ಶುರುವಾಗಿವೆ.