ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಅಧಿಸೂಚನೆ ಹೊರಡಿಸಿರುವ ಬಿಬಿಎಂಪಿ ವಾರ್ಡ್ ವಿಂಗಡಣೆಗೆ ಈಗಾಗಲೇ ಆಕ್ಷೇಪಣೆಗಳು ಎದುರಾಗಿವೆ. ಇದರ ಬೆನ್ನಲ್ಲೇ ಈ 45 ನೂತನ ವಾರ್ಡ್‌ಗಳಿಂದ 225 ಕೋಟಿ ರೂಪಾಯಿ ಆರ್ಥಿಕ ಹೊರೆ ಬೀಳಲಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಇತ್ತೀಚೆಗೆ ಪುನರ್ ವಿಂಗಡಿಸಿದ್ದ 243 ನೂತನ ವಾರ್ಡ್‌ಗಳಿಗೆ ರಾಜ್ಯ ಸರ್ಕಾರ ಗುರುವಾರ (ಜುಲೈ 14) ಅಧಿಕೃತ ಮುದ್ರೆ ಹಾಕಿದೆ.
ಬಿಬಿಎಂಪಿ ತನ್ನ ವ್ಯಾಪ್ತಿಯಲ್ಲಿದ್ದ 198 ವಾರ್ಡ್‌ಗಳನ್ನು 2011ರ ಜನಗಣತಿ ಆಧಾರದಲ್ಲಿ ಪ್ರತಿ ವಾರ್ಡ್‌ಗೆ 35 ಸಾವಿರ ಜನರು ಬರುವಂತೆ ವಿಂಗಡಿಸಿ 243ಕ್ಕೆ ಹೆಚ್ಚಿಸಿದೆ.
ಇದನ್ನು ರಾಜ್ಯ ಸರ್ಕಾರ ಅಂಗೀಕಾರ ಮಾಡಿ ಕರಡು ಅಧಿಸೂಚನೆ ಹೊರಡಿಸಿತ್ತು. ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ನೂತನ ವಾರ್ಡ್ ಕುರಿತು ಸಾರ್ವಜನಿಕ ಆಕ್ಷೇಪಣೆಗಳು ಇದ್ದಲ್ಲಿ ಸಲ್ಲಿಸುವಂತೆ ಕೋರಿತ್ತು. ಈಗ ರಚನೆ ಮಾಡಲಾಗಿರುವ ಪ್ರತಿ ಹೊಸ ವಾರ್ಡ್‌ಗೆ ಸರಾಸರಿ 5 ಕೋಟಿ ರೂಪಾಯಿ ಎಂದು ಅಂದಾಜಿಸಿದರೂ 225 ಕೋಟಿ ರೂಪಾಯಿ ಆರ್ಥಿಕ ಹೊರೆ ಬೀಳಲಿದೆ.
"2011 ರ ಜನಗಣತಿಯ ಆಧಾರದ ಮೇಲೆ ಗಡಿ ನಿರ್ಣಯ ಮಾಡಲಾಗಿದೆ. ಅದರ ಪ್ರಕಾರ ಬೆಂಗಳೂರು 88 ಲಕ್ಷ ಜನರನ್ನು ಹೊಂದಿದೆ. 198 ವಾರ್ಡ್‌ಗಳಲ್ಲಿ ಪ್ರತಿಯೊಂದೂ ವಾರ್ಡ್ ನಲ್ಲಿ 40,000-45,000 ಜನರಿದ್ದಾರೆ. ಆದರೆ, ಬೆಂಗಳೂರು ನಗರವು ಅಂದಿನಿಂದಲೂ ಮತ್ತಷ್ಟು ಬೆಳೆದಿದೆ. ಆದರೂ ಹಳೆಯ ಅಂಕಿ ಅಂಶಗಳ ಮೇಲೆಯೆ ವಿಂಗಡಣೆ ಮಾಡಲಾಗಿದೆ" ಎಂದು ಬಿಬಿಎಂಪಿಯ ಹಿರಿಯ ಅಧಿಕಾರಿಯೊಬ್ಬರನ್ನು ಡೆಕ್ಕನ್ ಹೆರಾಲ್ಡ್ ಉಲ್ಲೇಖಿಸಿದೆ.