ಬೆಂಗಳೂರು: ಹುಬ್ಬಳ್ಳಿಯ ಗಲಭೆ ಪ್ರಕರಣ ಸೇರಿದಂತೆ ಹಲವು ಪ್ರಮುಖ ಕೇಸ್ ಗಳನ್ನು ಕೈ ಬಿಟ್ಟ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ರಾಜ್ಯ ಬಿಜೆಪಿ ನಾಯಕರು ಹೋರಾಟಕ್ಕೆ ಮುಂದಾಗಿದ್ದಾರೆ. ರಾಜ್ಯ ಸರ್ಕಾರ ಮುಸ್ಲಿಮರ ಓಲೈಕೆಗಾಗಿ ಈ ರೀತಿ ಮಾಡುತ್ತಿದೆಯೇ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಹುಬ್ಬಳ್ಳಿ ಪೊಲೀಸ್ ಠಾಣೆ ಮೇಲಿನ ದಾಳಿಕೋರರ ವಿರುದ್ಧದ ಕೇಸ್ ಗಳನ್ನು ರಾಜ್ಯ ಸರ್ಕಾರ ಹಿಂಪಡೆಯಲು ತೀರ್ಮಾನಿಸಿದ್ದು ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ. ವಿಪಕ್ಷಗಳು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿವೆ. ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್, ಈ ಹಿಂದೆ ಬಿಜೆಪಿ ತಮ್ಮ ಸರ್ಕಾರವಿದ್ದಾಗ ಆರ್ ಎಸ್ಎಸ್ ವಿರುದ್ಧದ ಪ್ರಕರಣಗಳ್ನು ಹಿಂಪಡೆಯಲಿಲ್ಲವೇ ಎಂದು ಪ್ರಶ್ನಿಸಿವೆ.
ಹುಬ್ಬಳ್ಳಿ ಗಲಭೆಯಲ್ಲಿ ಕೆಲವೊಂದು ಅಮಾಯಕರ ಮೇಲೆ ಪ್ರಕರಣ ದಾಖಲಾಗಿತ್ತು. ಹೀಗಾಗಿ ನಿಯಮದ ಅನುಸಾರ ನಾವು ಸಚಿವ ಸಂಪುಟ ಉಪಸಮಿತಿಯಲ್ಲಿ ಅವಕಾಶವಿರುವಂತೆ ಕೇಸ್ ಕೈ ಬಿಡಲು ನಿರ್ಧರಿಸಿದ್ದೇವೆ. ಇದನ್ನು ಕೋರ್ಟ್ ಗೆ ಸಲ್ಲಿಸಲಿದ್ದೇವೆ. ಕೋರ್ಟ್ ಒಪ್ಪಿದರೆ ಮಾತ್ರ ಕೇಸ್ ಮರಳಿ ಪಡೆಯಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇನ್ನೊಂದೆಡೆ ಡಿಸಿಎಂ ಡಿಕೆ ಶಿವಕುಮಾರ್, ಬಿಜೆಪಿಯವರು ಯಾವೆಲ್ಲಾ ಪ್ರಕರಣಗಳನ್ನು ಕೈಬಿಟ್ಟಿದ್ದರು ಎಂದು ಪಟ್ಟಿ ಕೊಡುತ್ತೇವೆ ಎಂದು ಎಚ್ಚರಿಸಿದ್ದಾರೆ.
ಆದರೆ ಈ ಬಗ್ಗೆ ಬಿಜೆಪಿ ನಾಯಕರು ರಾಜ್ಯಾದ್ಯಂತ ಹೋರಾಟ ನಡೆಸಲು ಮುಂದಾಗಿದ್ದಾರೆ. ಪ್ರಕರಣ ಎನ್ಐಎ ಕೈಯಲ್ಲಿರುವಾಗ ರಾಜ್ಯ ಸರ್ಕಾರ ಕೇಸ್ ಹಿಂಪಡೆಯಲು ಅಸಾಧ್ಯ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಈ ಬಗ್ಗೆ ಇಂದು ಬಿಜೆಪಿ ರಾಜ್ಯಾದ್ಯಂತ ಹೋರಾಟ ನಡೆಸಲಿದೆ. ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ. ಇದರ ಬಗ್ಗೆ ಕೋರ್ಟ್ ಮೆಟ್ಟಿಲೇರುವ ಬಗ್ಗೆಯೂ ಬಿಜೆಪಿ ಚಿಂತನೆ ನಡೆಸಿದೆ.