ಬೆಂಗಳೂರು: ನೀವು ಸರಿಯಾಗಿ ಹಣಕಾಸು ನಿರ್ವಹಣೆ ಮಾಡದೇ ಈಗ ಕೇಂದ್ರ ಸರ್ಕಾರ ಸರಿಯಾಗಿ ಕೊಡುತ್ತಿಲ್ಲ ಎಂದು ದೂಷಿಸಿದರೆ ಹೇಗೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ರಾಜ್ಯ ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ.
ಇತ್ತೀಚೆಗೆ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ತೆರಿಗೆ ಹಣ ಹಂಚಿಕೆ ಮಾಡಿದೆ. ಆದರೆ ಕರ್ನಾಟಕಕ್ಕೆ ತೆರಿಗೆ ಹಣ ಹಂಚಿಕೆ ಮಾಡುವಾಗ ತಾರತಮ್ಯ ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಬಗ್ಗೆ ನಮ್ಮ ತೆರಿಗೆ ನಮ್ಮ ಹಕ್ಕು ಎಂದು ಮತ್ತೊಮ್ಮೆ ಹೋರಾಟ ಮಾಡಲು ಕಾಂಗ್ರೆಸ್ ಮುಂದಾಗಿದೆ.
ಈ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಹಿಂದಿನ ಯುಪಿಎ ಅವಧಿಗಿಂತಲೂ ಈಗಿನ ಎನ್ ಡಿಎ ಸರ್ಕಾರ ರಾಜ್ಯಕ್ಕೆ ತೆರಿಗೆ ಪಾಲು ಹೆಚ್ಚು ಕೊಟ್ಟಿದೆ. ಅಷ್ಟಕ್ಕೂ ಎಷ್ಟು ಹಣ ಕೊಡಬೇಕು ಎಂದು ನಿರ್ಧರಿಸುವುದು ಕೇಂದ್ರ ಸರ್ಕಾರವಲ್ಲ. ಹಣಕಾಸು ಆಯೋಗ. ಹಣಕಾಸು ಆಯೋಗ ನಿಗದಿಪಡಿಸಿದಷ್ಟು ಕೇಂದ್ರ ಹಣ ಕೊಟ್ಟಿದೆ ಎಂದು ಜೋಶಿ ಹೇಳಿದ್ದಾರೆ.
2016-17 ರಲ್ಲಿ ಸಿದ್ದರಾಮಯ್ಯ ಇದ್ದಾಗಲೇ ಹಣಕಾಸು ಆಯೋಗ ಎಷ್ಟು ಹಣ ಕೊಡಬೇಕೆಂದು ನಿಗದಿಪಡಿಸಿದೆ. ಆಗಲೇ ಹಣಕಾಸು ಆಯೋಗದ ಮುಂದೆ ತಮ್ಮ ವಾದ ಮಂಡಿಸಬೇಕಿತ್ತು. ಆಗ ಸುಮ್ಮನಿದ್ದು ಈಗ ಮಾತನಾಡಿದರೆ ಪ್ರಯೋಜನವಾಗುತ್ತದೆಯೇ ಎಂದು ಜೋಶಿ ಪ್ರಶ್ನೆ ಮಾಡಿದ್ದಾರೆ.
ಏನೇ ಕೆಟ್ಟದಾದರೂ ಅದು ಬಿಜೆಪಿಯಿಂದ ಎನ್ನುವ ಜಾಯಮಾನ ಕಾಂಗ್ರೆಸ್ ರೂಢಿಸಿಕೊಂಡಿದೆ. ಸರಿಯಾಗಿ ಹಣಕಾಸಿನ ಪರಿಸ್ಥಿತಿ ನಿಭಾಯಿಸಿದ್ರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಇನ್ನಾದರೂ ಹಣಕಾಸು ಆಯೋಗದ ಮುಂದೆ ತಮ್ಮ ವಾದ ಸರಿಯಾಗಿ ಮಂಡಿಸಿ ಎಂದು ಜೋಶಿ ಸಲಹೆ ನೀಡಿದ್ದಾರೆ.