ಗಣೇಶ ಹಬ್ಬವನ್ನು ಆಚರಿಸಲು ಇಡೀ ರಾಜ್ಯ ಸಜ್ಜಾಗಿದೆ. ಈಗಾಗಲೇ ಮಾರ್ಕೆಟ್ಗಳಲ್ಲಿ ಹಬ್ಬದ ಖರೀದಿ ಶುರುವಾಗಿದೆ. ಹಬ್ಬದ ತಯಾರಿ ಜೋರಾಗಿ ಸಾಗಿದೆ. ಇದರ ನಡುವೆ ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆ ಬೆಂಗಳೂರಿನಲ್ಲಿ ಆ.31ರಂದು ಪ್ರಾಣಿವಧೆ ಮತ್ತು ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ ಎಂದು ಬಿಬಿಎಂಪಿ ಆದೇಶ ಹೊರಡಿಸಿದೆ. ಬಿಬಿಎಂಪಿ ವ್ಯಾಪ್ತಿಯ ಎಲ್ಲ ಕಸಾಯಿಖಾನೆಯಲ್ಲಿ ಪ್ರಾಣಿವಧೆ ನಿಷೇಧ ಅನ್ವಯವಾಗಲಿದೆ. ಮಾರಾಟ ಮಳಿಗೆಗಳಲ್ಲಿ ಮಾಂಸ ಮಾರಾಟ ನಿಷೇಧ ಮಾಡಲಾಗಿದೆ. ಈ ಕುರಿತು ಬಿಬಿಎಂಪಿ ಜಂಟಿ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ. 2022ರ ಆಗಸ್ಟ್ 31ರ ಬುಧವಾರದಂದು ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಬಿಬಿಎಂಪಿ ವ್ಯಾಪ್ತಿಯ ಕಾಸಾಯಿಖಾನೆಯಲ್ಲಿ ಪ್ರಾಣಿವಧೆ ಹಾಗೂ ಮಾರಾಟ ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಹಿಂದೆ ಕೂಡ ಇದೇ ತಿಂಗಳ ಆರಂಭದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬದಂದು ಮಾಂಸ ಮಾರಾಟ ಮತ್ತು ಪ್ರಾಣಿ ವಧೆಯನ್ನು ನಿಷೇಧಿಸಿ ನಾಗರಿಕ ಸಂಸ್ಥೆ ಸುತ್ತೋಲೆ ಹೊರಡಿಸಿತ್ತು. ಈಗ ಗಣೇಶ ಚತುರ್ಥಿ ಹಬ್ಬಕ್ಕೂ ಇದೇ ಆದೇಶ ಮುಂದುವರೆದಿದೆ.