ಸಿಎಂ ಹೆಚ್.ಡಿ.ಕುಮಾರಸ್ವಾಮಿ ಬಿಡುಗಡೆಗೊಳಿಸಿರುವ ಆಡಿಯೋ ಬಗ್ಗೆ ರಾಷ್ಟ್ರಪತಿಗೆ ದೂರು ನೀಡಲು ಕಾಂಗ್ರೆಸ್ ನಾಯಕರು ಸಜ್ಜಾಗಿದ್ದಾರೆ.
ಅಪರೇಷನ್ ಕಮಲ ಹೆಸರಿನಲ್ಲಿ ಶಾಸಕರಿಗೆ ಆಮಿಷವೊಡ್ಡಲು ನಡೆಸಿದ ಸಂಭಾಷಣೆಯ ಆಡಿಯೋ ಬಹಿರಂಗವಾಗಿರುವುದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಕೈ ನಾಯಕರು ಮುಂದಾಗಿದ್ದಾರೆ. ಈ ಪ್ರಕರಣವನ್ನು ರಾಷ್ಟ್ರಪತಿ ಅಂಗಳಕ್ಕೆ ಕೊಂಡೊಯ್ಯಲು ಕಾಂಗ್ರೆಸ್ ನಿರ್ಧರಿಸಿದೆ.
ನಾಳೆ ಸಂಸತ್ ಅಧಿವೇಶನ ಅಂತ್ಯಗೊಳ್ಳುತ್ತಿದ್ದು, ಹೈಕಮಾಂಡ್ ಒಪ್ಪಿಗೆಗೆ ಕಾಯುತ್ತಿದ್ದು, ರಾಹುಲ್ ಗಾಂಧಿಯಿಂದ ಹಸಿರು ನಿಶಾನೆ ಸಿಕ್ಕ ಬಳಿಕ ಆಡಿಯೋ ಪ್ರಕರಣದಲ್ಲಿ ಮಧ್ಯಪ್ರವೇಶಿಸುವಂತೆ ರಾಮನಾಥ್ ಕೋವಿಂದ್ ಅವರಿಗೆ ಮನವಿ ಸಲ್ಲಿಸಲಾಗುತ್ತದೆ.
ಮುಂಬರುವ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿಗೆ ರಾಷ್ಟ್ರಮಟ್ಟದಲ್ಲಿ ಮತ್ತಷ್ಟು ಹಾನಿ ಮಾಡಲು ಕೈ ನಾಯಕರು ತೀರ್ಮಾನಿಸಿದ್ದಾರೆ. ಆಪರೇಷನ್ ಕಮಲದ ಹೆಸರಿನಲ್ಲಿ ಶಾಸಕರಿಗೆ ಗಾಳ ಹಾಕಲು ಮುಂದಾಗಿರುವ ವಿಚಾರ ಬಿಜೆಪಿಗೆ ಮುಜುಗರ ಉಂಟುಮಾಡಿದೆ.
ಆಡಿಯೋ ಪ್ರಕರಣ ಲೋಕಸಭೆಯಲ್ಲಿ ನಿನ್ನೆ ಕಾವೇರಿದ ಚರ್ಚೆಗೆ ಕಾರಣವಾಗಿತ್ತು. ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಬಿಜೆಪಿಯನ್ನು ತೀವ್ರವಾಗಿ ತರಾಟೆಗೆತೆಗೆದುಕೊಂಡಿದ್ದರು.