ಬೆಂಗಳೂರು: ನಾಳೆ ಸಿಎಂ ಸಿದ್ದರಾಮಯ್ಯ ಕರ್ನಾಟಕ ಬಜೆಟ್ 2025 ರನ್ನು ಮಂಡಿಸಲಿದ್ದು ಬಜೆಟ್ ಬೆನ್ನಲ್ಲೇ ಮತ್ತೊಂದು ಬೆಲೆ ಏರಿಕೆಗೆ ನೀವು ಸಜ್ಜಾಗಬೇಕಿದೆ.
ಈಗಾಗಲೇ ರಾಜ್ಯ ಸರ್ಕಾರ ಕೆಎಸ್ ಆರ್ ಟಿಸಿ, ಬಿಎಂಟಿಸಿ ಸೇರಿದಂತೆ ಸರ್ಕಾರೀ ಸ್ವಾಮ್ಯದ ಬಸ್ ಗಳ ಪ್ರಯಾಣ ದರವನ್ನು ಶೇ.15 ರಷ್ಟು ಹೆಚ್ಚಳ ಮಾಡಿದೆ. ಇದರ ಜೊತೆಗೆ ಮೆಟ್ರೋ ಪ್ರಯಾಣ ದರವೂ ಹೆಚ್ಚಾಗಿದೆ.
ಇದೀಗ ರಾಜ್ಯ ಸರ್ಕಾರ ನಂದಿನಿ ಹಾಲಿನ ದರ ಏರಿಕೆಗೆ ಮುಂದಾಗಿದೆ. ಈಗಾಗಲೇ ಕೆಎಂಎಫ್ ದರ ಏರಿಕೆಗೆ ಸರ್ಕಾರದ ಮುಂದೆ ಪ್ರಸ್ತಾವನೆಯಿಟ್ಟಿದೆ. ಈ ಬಜೆಟ್ ಘೋಷಣೆಯಾದ ಬಳಿಕ ನಂದಿನಿ ಹಾಲಿನ ದರದಲ್ಲೂ ಏರಿಕೆಯಾಗಲಿದೆ ಎಂದು ವರದಿಯಾಗಿದೆ.
ಪ್ರತೀ ಲೀಟರ್ ಗೆ 5 ರೂ.ಗಳಷ್ಟು ದರ ಏರಿಕೆ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಇಡಲಾಗಿದೆ. ಈ ಹಣ ರೈತರಿಗೆ ಸೇರಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಎಂದು ಸಚಿವ ಕೆಎನ್ ರಾಜಣ್ಣ ಹೇಳಿದ್ದಾರೆ. ಹೀಗಾಗಿ ಬಜೆಟ್ ಬೆನ್ನಲ್ಲೇ ನಂದಿನಿ ದರ ಹೆಚ್ಚಳವಾಗುವುದು ಗ್ಯಾರಂಟಿಯಾಗಿದೆ.