ಬೆಂಗಳೂರು: ನಾಳೆ ಬಹಿನಿರೀಕ್ಷಿತ ಕರ್ನಾಟಕ ಬಜೆಟ್ 2025 ರನ್ನು ಸಿಎಂ ಸಿದ್ದರಾಮಯ್ಯ ಮಂಡಿಸಲಿದ್ದಾರೆ. ಈ ಬಜೆಟ್ ನ ಮೇಲೆ ಜನರ ನಿರೀಕ್ಷೆ ಅಪಾರವಾಗಿದ್ದು, ಹೇಗಿರಲಿದೆ ಸಿದ್ದು ಲೆಕ್ಕ ಇಲ್ಲದೆ ವಿವರ.
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಜೊತೆಗೆ ಇಷ್ಟು ದಿನ ಶಾಸಕರಿಗೆ ಅನುದಾನ ಸಿಕ್ತಿಲ್ಲ, ಅಭಿವೃದ್ಧಿ ಯೋಜನೆಗಳಿಗೆ ಹಣ ಸಾಕಾಗುತ್ತಿಲ್ಲ ಎಂಬ ಆರೋಪಗಳನ್ನು ತೊಡೆದು ಹಾಕುವಂತಹ ಬಜೆಟ್ ನ್ನು ಮಂಡಿಸುವ ಸವಾಲು ಸಿದ್ದರಾಮಯ್ಯನವರದ್ದಾಗಿದೆ.
ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ, ಅಗತ್ಯ ವಸ್ತುಗಳ ಬೆಲೆ ಇಳಿಕೆಗೆ ಕ್ರಮ ಕೈಗೊಳ್ಳಿ ಎಂಬುದು ಸಾಮಾನ್ಯ ಜನರ ಬೇಡಿಕೆಯಾಗಿದೆ. ಈ ಬಾರಿ ಬಜೆಟ್ ನಲ್ಲಿ ಸಿಎಂ ಮೂಲ ಸೌಕರ್ಯಾಭಿವೃದ್ಧಿಗೆ ಒತ್ತು ನೀಡಲಿದ್ದಾರೆ ಎನ್ನಲಾಗಿದೆ.
ಗ್ರಾಮೀಣ ರಸ್ತೆಗಳ ಅಭಿವೃದ್ಧಿ, ಶಿಕ್ಷಣ ಕ್ಷೇತ್ರದ ಅಭಿವೃದ್ಧಿ, ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು, ಕೈಗಾರಿಕೆಗಳಿಗೆ ವಿಶೇಷ ವಲಯ ನಿರ್ಮಾಣ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಸಂಖ್ಯೆ ಹೆಚ್ಚಳ ಇತ್ಯಾದಿ ಸಿಎಂ ಬಜೆಟ್ ನಲ್ಲಿ ನಿರೀಕ್ಷೆಯಿದೆ. ಮೂಲಸೌಕರ್ಯಾಭಿವೃದ್ಧಿಗೆ ಒತ್ತು ನೀಡುವ ಮೂಲಕ ಅನುದಾನ ಸಿಕ್ತಿಲ್ಲ ಎಂದು ಅಸಮಾಧಾನಗೊಂಡಿರುವ ಸ್ವಪಕ್ಷದ ಶಾಸಕರ ಮೂಗಿಗೂ ತುಪ್ಪ ಸವರುವ ಸಾಧ್ಯತೆಯಿದೆ. ಜೊತೆಗೆ ಬೆಲೆ ಏರಿಕೆಯಿಂದಾಗಿ ಜನರೂ ಆಕ್ರೋಶಗೊಂಡಿದ್ದು ಜನಪ್ರಿಯ ಬಜೆಟ್ ಮಂಡಿಸುವ ಮೂಲಕ ಗ್ಯಾರಂಟಿ ಸರ್ಕಾರಕ್ಕೆ ಹೊರೆಯಾಗಿಲ್ಲ ಎಂದು ನಿರೂಪಿಸುವ ಗುರಿ ಹೊಂದಿದ್ದಾರೆ.