Publish Date: Fri, 13 Oct 2017 (21:01 IST)
Updated Date: Fri, 13 Oct 2017 (21:04 IST)
ಕಲಬುರ್ಗಿ: ದೇವರಿಗೆ ನೀರು ತರಲು ನದಿಗೆ ಹೋಗಿದ್ದ ಬಾಲಕ ನೀರುಪಾಲಾಗಿರುವ ಘಟನೆ ಅಫ್ಜಲ್ ಪುರ ತಾಲೂಕಿನ ತೆಲ್ಲೂರು ಗ್ರಾಮದ ಬಳಿ ಅಮರ್ಜಾ ನದಿಯಲ್ಲಿ ನಡೆದಿದೆ.
ತೆಲ್ಲೂರು ನಿವಾಸಿ ಶಾಂತಪ್ಪ ಧರಿಗೊಂಡ ಪುತ್ರ 9ನೇ ತರಗತಿ ಓದುತ್ತಿದ್ದ ಸಾಗರ(16) ಮೃತ ಬಾಲಕ. ಇಂದು ಗ್ರಾಮದ ದೇವತೆ ಜಾತ್ರೆಯಿದ್ದ ಹಿನ್ನೆಲೆ ಮೀಸಲು ನೀರು ತಂದು ದೇವರಿಗೆ ಅಭಿಷೇಕ ಮಾಡಲು ನದಿಗೆ ಹೋಗಿದ್ದ. ಅಮರ್ಜಾ ಡ್ಯಾಂನಿಂದ ಬಿಟ್ಟ ನೀರು ಒಮ್ಮಿಂದೊಮ್ಮಲೆ ಹರಿದು ಬಂದಿರೋದ್ರಿಂದ ನೀರಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ ಎನ್ನಲಾಗಿದೆ.
ಮಳೆ ಹಿನ್ನೆಲೆ ಡ್ಯಾಂನಿಂದ ಹೆಚ್ವಿನ ನೀರು ನದಿಗೆ ಹರಿಯಬಿಡಲಾಗುತ್ತಿದೆ ಎಂದು ನೀರಾವರಿ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರೂ ನದಿಗೆ ಹೋಗಿದ್ರಿಂದ ಈ ಅವಘಡ ಸಂಭವಿಸಿದೆ. ಬಾಲಕನ ಶವಕ್ಕಾಗಿ ಹುಡುಕಾಟ ನಡೆಸುತ್ತಿದ್ದು, ದೇವಲಗಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.