ಬೆಂಗಳೂರು : ಇದುವರೆಗೂ ಹಾದಿ- ಬೀದಿಯಲ್ಲಿ ನಡೆಯುತ್ತಿದ್ದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಮೈಸೂರು ಜಿಲ್ಲೆಯ ಶಾಸಕ ಸಾ. ರಾ ಮಹೇಶ್ ನಡುವಣ ವೈಮನಸ್ಯ ಪರಸ್ಪರ ಆಕ್ರೋಶ ವಿಧಾನಸಭೆಯಲ್ಲಿಂದು ಅನಾವರಣಗೊಂಡಿತು.
ಸರ್ಕಾರದ ಅಧಿಕಾರಿಗಳು ಅಧಿಕಾರಿಗಳಾಗಿಯೇ ಕೆಲಸ ಮಾಡಬೇಕೆ ಹೊರತು ಸರ್ವಾಧಿಕಾರಿಗಳಾಗಬಾರದು. ಇದನ್ನೂ ಸರಕಾರ ಸಹಿಸುವುದಿಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ ಮಾಧುಸ್ವಾಮಿ ಅಧಿಕಾರಿಗೆ ಎಚ್ಚರಿಕೆ ನೀಡಿದ ಘಟನೆಯೂ ಜರುಗಿತು.
ವಿಧಾನಸಭೆಯ ಶೂನ್ಯವೇಳೆಯಲ್ಲಿಂದು ಸಾ. ರಾ ಮಹೇಶ್ ಅವರು ಮಂಡಿಸಿದ್ದ ಹಕ್ಕು ಚ್ಯುತಿ ಪ್ರಸ್ತಾಪಕ್ಕೆ ಉತ್ತರ ನೀಡಿದ ಸಚಿವರು, ಈ ವಿಚಾರದಲ್ಲಿ ಸರ್ಕಾರ ಅಂದಿನ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ವಿರುದ್ಧ ಕ್ರಮ ತೆಗೆದುಕೊಳ್ಳಲಿದೆ ಎಂದು ಸದನಕ್ಕೆ ತಿಳಿಸಿದರು.
ಅಧಿಕಾರಿ ತನ್ನ ಅಧಿಕಾರದ ವ್ಯಾಪ್ತಿ ಮೀರಿ ವರ್ತನೆ ಮಾಡಿದರೆ ಅವರ ವಿರುದ್ಧ ಕ್ರಮಕೈಗೊಳ್ಳುವುದು ಸರ್ಕಾರಕ್ಕೆ ಅನಿವಾರ್ಯವಾಗಿದೆ ಎಂದರು. ಈ ಕಾನೂನು ಉಲ್ಲಂಘನೆಯನ್ನು ಯಾರೇ ಮಾಡಿದರು ಅದು ತಪ್ಪಾಗಲಿದೆ ಈ ನಿಟ್ಟಿನಲ್ಲಿ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದರು. ಇನ್ನೂ ಸದನದಲ್ಲಿ ಹಾಜರಿದ್ದಂತ ಕೆಆರ್ ನಗರ ಶಾಸಕ ಸಾರಾ ಮಹೇಶ್ ಅವರು, ರೋಹಿಣಿ ಸಿಂಧೂರಿ ಅವರು 30 ಲಕ್ಷಕ್ಕೆ ಈಜು ಕೊಳ ನಿರ್ಮಾಣ ಮಾಡಿರುವುದು ಮತ್ತು 15 ಲಕ್ಷಕ್ಕೆ ಕಚೇರಿ ನವೀಕರಣ ಮಾಡಿರುವುದನ್ನು ಸದನದಲ್ಲಿಯೇ ಪೋಟೋ ಸಹಿತ ಪ್ರದರ್ಶನ ಮಾಡಿದರು.
ಬಳಿಕ ಮಾತನಾಡಿದ ಶಾಸಕರು, ಆಧಿಕಾರಿ ಶಾಸಕರ ಹಕ್ಕು, ನಗರಪಾಲಿಕೆ ಹಕ್ಕು ಮತ್ತು ಪಟ್ಟಣ ಪಂಚಾಯಿತಿ ಹಾಗೂ ಪುರಸಭೆಯ ಹಕ್ಕನ್ನು ಮೊಟಕು ಮಾಡಿ ಅಧಿಕಾರಿ ಸರ್ವಾಧಿಕಾರಿಯಂತೆ ವರ್ತನೆ ಮಾಡಿದ್ದಾರೆ. ಕಾನೂನುಬದ್ಧವಾಗಿ ಪ್ರಸ್ತಾಪ ಮಾಡಿದ ಕಾಮಗಾರಿಗಳನ್ನು ಮತ್ತು ಅನುದಾನವನ್ನು ಬದಿಗೆ ಸರಿಸಿ ತಮಗೆ ಬೇಕಾದಂತೆ ಮಾಡಿದ್ದಾರೆ ಹೀಗಾಗಿ ಅವರ ವಿರುದ್ಧ ಹಕ್ಕು ಚ್ಯುತಿ ಕ್ರಮ ಕ್ರಮ ಕೈಗೊಳ್ಳಬೇಕೆಂದು ಸಾ.ರಾ ಮಹೇಶ್ ಸರ್ಕಾರವನ್ನು ಆಗ್ರಹಪಡಿಸಿದರು.