ಸ್ಥಳೀಯ ಬಿಜೆಪಿ ನಾಯಕರೊಬ್ಬರ ಲಸಿಕೆ ಪ್ರಮಾಣ ಪತ್ರದಲ್ಲಿ ಐದು ಬಾರಿ ಲಸಿಕೆ ನೀಡಲಾಗಿದೆ ಎಂದು ನಮೂದಿಸಲಾಗಿದ್ದು ಆರನೇ ಲಸಿಕೆಗೆ ದಿನಾಂಕವನ್ನೂ ನಿಗದಿಯಾಗಿದೆ. ಉತ್ತರ ಪ್ರದೇಶದ ಸರ್ದಾನಾ ಏರಿಯಾದಲ್ಲಿ ಇಂತದ್ದೊಂದು ವಿಚಿತ್ರ ಘಟನೆ ವರದಿಯಾಗಿದೆ. ಇದೊಂದು ಕಿಡಿಗೇಡಿತನದ ಕೃತ್ಯ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಶಂಕಿಸಿದ್ದಾರೆ.
73 ವರ್ಷದ ರಾಂಪಾಲ್ ಸಿಂಗ್ ಎಂಬವರು ಬೂತ್ ಸಂಖ್ಯೆ 79ರ ಬಿಜೆಪಿ ಅಧ್ಯಕ್ಷರಾಗಿದ್ದರು. ಇವರು ಹಿಂದೂ ಯುವ ವಾಣಿಯ ಸದಸ್ಯರೂ ಸಹ ಹೌದು. ಕೊರೊನಾ ಲಸಿಕೆಯ ಪ್ರಮಾಣ ಪತ್ರವನ್ನು ಡೌನ್ಲೋಡ್ ಮಾಡಿದ ವೇಳೆಯಲ್ಲಿ ಈ ಯಡವಟ್ಟು ಬೆಳಕಿಗೆ ಬಂದಿದೆ.
ರಾಮ್ಪಾಲರ ಲಸಿಕೆ ಪ್ರಮಾಣ ಪತ್ರದಲ್ಲಿ ಅವರಿಗೆ ಐದು ಡೋಸ್ ಲಸಿಕೆ ನೀಡಲಾಗಿದೆ ಹಾಗೂ ಆರನೇ ಡೋಸ್ ಲಸಿಕೆಗೆ ದಿನಾಂಕ ನಿಗದಿಯಾಗಿದೆ ಎಂದು ವಿವರ ನೀಡಲಾಗಿದೆ. ಇದಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎಂದು ರಾಮ್ಪಾಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಮ್ಪಾಲ್ ಸಿಂಗ್ ತಮ್ಮ ಲಸಿಕೆಯ ಮೊದಲ ಡೋಸ್ನ್ನು ಮಾರ್ಚ್ 16ರಂದು ಹಾಗೂ ಎರಡನೇ ಡೋಸ್ನ್ನು ಮೇ 8ರಂದು ಸ್ವೀಕರಿಸಿದ್ದರು.
ಆದರೆ ಡೌನ್ಲೋಡ್ ಮಾಡಲಾದ ಲಸಿಕೆ ಪ್ರಮಾಣ ಪತ್ರದಲ್ಲಿ ಐದು ಲಸಿಕೆಯನ್ನು ನೀಡಲಾಗಿದೆ ಹಾಗೂ ಡಿಸೆಂಬರ್ ಹಾಗೂ ಜನವರಿ ತಿಂಗಳಲ್ಲಿ ಆರನೇ ಡೋಸ್ ನೀಡಲಾಗುತ್ತದೆ ಎಂದು ಹೇಳಲಾಗಿದೆ.