ರಾಜ್ಯಾದ್ಯಂತ ಎಸಿಬಿ ಅಧಿಕಾರಿಗಳ ವ್ಯಾಪಕ ಕಾರ್ಯಾಚರಣೆ- 18 ಭ್ರಷ್ಟ ಅಧಿಕಾರಿಗಳ ಮೇಲೆ ದಾಳಿ |ಹುಡುಕಿದಷ್ಟು ಸಿಗುತ್ತಿದೆ ಭ್ರಷ್ಟ ಅಧಿಕಾರಿಗಳ ಚರ- ಸ್ಥಿರಾಸ್ತಿ | ಕೆಜಿಗಟ್ಟಲೆ ಚಿನ್ನ, ಬೆಳ್ಳಿ ಆಭರಣ – ಗಟ್ಟಿಗಳ ಪತ್ತೆ |ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಆಸ್ತಿ- ಪಾಸ್ತಿ ದಾಖಲೆಗಳ ಬಗ್ಗೆ ಎಸಿಬಿ ಅಧಿಕಾರಿಗಳಿಂದ ಶೋಧ
300 ಸಿಬ್ಬಂದಿಯ ಜೊತೆ ಶೋಧ ಕಾರ್ಯದ ವೇಳೆ ಭ್ರಷ್ಟ ಸರ್ಕಾರಿ ಅಧಿಕಾರಿಗಳ ಬಳಿ ಲಕ್ಷದಿಂದ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಆಸ್ತಿ, ಒಡವೆ, ಚಿನ್ನಾಭರಣ, ಬೆಲೆ ಬಾಳುವ ವಸ್ತುಗಳು, ನಿವೇಶನ, ಕಟ್ಟಡ, ಕಾಂಪ್ಲೆಕ್ಸ್, ಮ್ಯೂಚೆಲ್ ಫಂಡ್ ಹೂಡಿಕೆ, ಕೃಷಿಭೂಮಿ ಸೇರಿದಂತೆ ವಿವಿಧ ರೀತಿ ಚರ-ಸ್ಥಿರಾಸ್ತಿಗಳನ್ನು ಎಸಿಬಿ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಹೊತ್ತು ಹೋದಂತೆ ಆ ಲಂಚಬಾಕ ಅಧಿಕಾರಿಗಳ ಆಸ್ತಿ-ಪಾಸ್ತಿಗಳನ್ನು ಕಂಡು ಕಾರ್ಯಾಚರಣೆ ನಡೆಸುತ್ತಿರುವ ಪೊಲೀಸರೇ ದಂಗುಬಡಿದು ಹೋಗಿದ್ದಾರೆ.
ರಾಯಚೂರಿನ ಕೃಷ್ಣ ಜಲಭಾಗ್ಯ ನಿಗಮದ ಎಇಇ ಅಶೋಕ್ ರೆಡ್ಡಿ ಮನೆಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದಾಗ ಮನೆಯವರು ಬೆದರಿ, ತಮ್ಮ ಮನೆಯ ಕಸದ ಡಬ್ಬಕ್ಕೆ ನಗದು, ಚಿನ್ನಾಭರಣ, ಬೆಳ್ಳಿಯ ಆಭರಣಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ಬಿಸಾಡಿದ್ದರು. ಆದರೆ ಎಸಿಬಿ ದಳ ಪೊಲೀಸರು ಇದನ್ನು ಪತ್ತೆಹಚ್ಚಿ ಕವರ್ ಬಿಚ್ಚಿ ನೋಡಿದಾಗ ಅದರಲ್ಲಿ 7 ಲಕ್ಷ ನಗದು, 41 ತೊಲೆ ಚಿನ್ನ ಹಾಗೂ 60 ತೊಲೆ ಬೆಳ್ಳಿಯ ಆಭರಣಗಳು ಪತ್ತೆಯಾಯಿತು.
ಚಿಕ್ಕಮಗಳೂರಿನ ಲೋಕೋಪಯೋಗಿ ಇಲಾಖೆಯ ಎಇ ಗವಿರಂಗಪ್ಪ ತಮ್ಮ ಐಷಾರಾಮಿ ಮನೆಯಲ್ಲಿ ಭಾರೀ ಮೌಲ್ಯ ಹೋಮ್ ಥಿಯೇಟರ್ ಸೌಲಭ್ಯ ಕಲ್ಪಿಸಿಕೊಂಡಿದ್ದನ್ನು ಕಂಡು ಎಸಿಬಿ ಅಧಿಕಾರಿಗಳು ಹುಬ್ಬೇರಿಸಿದ್ದರು.