Publish Date: Mon, 01 Oct 2018 (16:34 IST)
Updated Date: Mon, 01 Oct 2018 (16:36 IST)
ಮಂಡ್ಯದಲ್ಲಿ ಸೆ. 29 ರಂದು ಯುವಕನೊಬ್ಬ ಸ್ನೇಹಿತನನ್ನು ಭೀಕರವಾಗಿ ಕೊಲೆ ಮಾಡಿ ರುಂಡದೊಂದಿಗೆ ಪೊಲೀಸ್ ಠಾಣೆಗೆ ತಂದು ಶರಣಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಟ್ವಿಸ್ಟ್ ದೊರಕಿದೆ.
ಚಿಕ್ಕಬಾಗಿಲು ಗ್ರಾಮಸ್ಥರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಕೊಲೆಗೈದಿರುವ ಪಶುಪತಿ ಹೇಗಾದರೂ ಮಾಡಿ ಹೆಸರು ಮಾಡಬೇಕೆಂಬ ಹುಚ್ಚುತನದಿಂದ ತನ್ನ ತಾಯಿಯೊಂದಿಗೆ ಕೆಟ್ಟದಾಗಿ ನಡೆದುಕೊಂಡಿದ್ದಕ್ಕೆ ಕೊಲೆ ಮಾಡಿರುವುದಾಗಿ ಸುಳ್ಳು ಹೇಳಿಕೆ ನೀಡಿದ್ದಾನೆ ಎಂದಿದ್ದಾರೆ.
ಸೆ.29ರಂದು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಚಿಕ್ಕಬಾಗಿಲು ಗ್ರಾಮದ ಹೊರವಲಯದಲ್ಲಿ ಪಶುಪತಿ ಎಂಬಾತ ಸ್ನೇಹಿತ ಗಿರೀಶ್ ಎಂಬುವನನ್ನು ಕೊಲೆಗೈದಿದ್ದ. ನಂತರ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಗೆ ರುಂಡದೊಂದಿಗೆ ಬಂದು ಶರಣಾಗಿದ್ದ. ಈ ವೇಳೆ ಗಿರೀಶ ತನ್ನ ತಾಯಿಗೆ ಕೆಟ್ಟದಾಗಿ ಸನ್ನೆ ಮಾಡಿದ್ದರಿಂದ ಕೊಲೆ ಮಾಡಿರುವುದಾಗಿ ಹೇಳಿಕೆ ನೀಡಿದ್ದ. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಬಾಗಿಲು ಗ್ರಾಮದ ಮುಖಂಡರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೊಲೆಯಾಗಿರುವ ಗಿರೀಶ್ ತುಂಬಾ ಒಳ್ಳೆಯ ಹುಡುಗ. ಯಾವ ಹೆಣ್ಣಿನೊಂದಿಗೂ ಆತ ಕೆಟ್ಟದಾಗಿ ನಡೆದುಕೊಂಡಿಲ್ಲ. ಜೊತೆಗೆ ಆಧಾರ ಸ್ಥಂಭವಾಗಿದ್ದ ಒಬ್ಬನೇ ಮಗನನ್ನ ಕಳೆದುಕೊಂಡು ಗಿರೀಶನ ಕುಟುಂಬ ಬೀದಿಗೆ ಬಿದ್ದಿದೆ.
ಕೊಲೆ ಆರೋಪಿ ಪಶುಪತಿ ಹೇಗಾದರೂ ಮಾಡಿ ರಾಜ್ಯದಲ್ಲೇ ಹೆಸರು ಮಾಡಬೇಕೆಂಬ ದುರುದ್ದೇಶದಿಂದ ತಾಯಿಯನ್ನ ಕೆಟ್ಟದಾಗಿ ಸನ್ನೆ ಮಾಡಿದ್ದಕ್ಕೆ ಕೊಲೆ ಮಾಡಿರುವುದಾಗಿ ಹೇಳಿಕೆ ನೀಡಿದ್ದಾನೆ. ಈ ಹಿಂದೆ ತನ್ನ ಸ್ನೇಹಿತರೊಂದಿಗೆ ಪಶುಪತಿ ಹೇಗಾದರೂ ಮಾಡಿ ಹೆಸರು ಮಾಡುತ್ತೇನೆ ಎಂದು ಹೇಳಿಕೊಳ್ಳುತ್ತಿದ್ದ. ಮುಂಗೋಪಿಯಾಗಿದ್ದ ಆತ ಕೆಲವರೊಂದಿಗೆ ಜಗಳ ತೆಗೆದು ತಲೆ ಕತ್ತರಿಸುತ್ತೇನೆ ಎಂದು ಹೇಳಿದ್ದ. ಆತನ ಹೇಳಿಕೆಯಿಂದ ಗ್ರಾಮಕ್ಕೆ ಕೆಟ್ಟ ಹೆಸರು ಬಂದಿದೆ ಎಂದಿದ್ದಾರೆ.
Jagadeesh
Publish Date: Mon, 01 Oct 2018 (16:34 IST)
Updated Date: Mon, 01 Oct 2018 (16:36 IST)