ಶಿಕ್ಷಣಕಾಶಿ ಖ್ಯಾತಿಯ ಧಾರವಾಡದಲ್ಲಿ ಜ. 4 ರಂದು ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೆಚ್ಚುವರಿಯಾಗಿ 5 ಕೋಟಿ ರೂ. ಅನುದಾನವನ್ನು ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಜಿಲ್ಲಾ ಅಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಹೇಳಿದರು.
ಧಾರವಾಡ ನಗರದಲ್ಲಿ ಸಾರ್ವಜನಿಕ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ಸಾಹಿತ್ಯ ಸಮ್ಮೇಳನದ ಅಂಗವಾಗಿ ನಗರದ ಸೌಂದರ್ಯಕ್ಕೆ ಆದ್ಯತೆ ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದರು. ಸಾಹಿತ್ಯ ಸಮ್ಮೇಳನದ ಸಿದ್ಧತೆಯ ಕುರಿತು ಜಿಲ್ಲಾಧಿಕಾರಿ ಹಾಗೂ ಕಸಾಪ ಅಧ್ಯಕ್ಷರೊಂದಿಗೆ ಚರ್ಚಿಸಿ ವಸತಿ, ಆಹಾರ, ವೇದಿಕೆ, ಮಾಧ್ಯಮ ಪ್ರಚಾರ, ಶಿಷ್ಟಾಚಾರ ಕುರಿತು ಸಲಹೆ ಸೂಚನೆಗಳನ್ನು ನೀಡಿದರು.
ಬಾಂಗ್ಲಾ ನುಸುಳುಕೋರರ ಬಗ್ಗೆ ಇತ್ತೀಚೆಗೆ ಬಿಜೆಪಿ ಶಾಸಕ ಅರವಿಂದ ಬೆಲ್ಲದ ಹೇಳಿಕೆ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಚಿವ ದೇಶಪಾಂಡೆ, ಬಾಂಗ್ಲಾ ನುಸುಳುಕೋರರ ಬಗ್ಗೆ ಶಾಸಕ ಬೆಲ್ಲದ ಅವರು ದೂರು ನೀಡಿ ಸಮಸ್ಯೆಯನ್ನು ನಿರ್ಮೂಲನೆ ಮಾಡುವ ಬಗ್ಗೆ ಪ್ರಯತ್ನ ನಡೆಸಲಿ. ಅದನ್ನು ಬಿಟ್ಟು ಜನತೆಗೆ ತಪ್ಪು ಸಂದೇಶ ನೀಡಿ ಭಯದ ವಾತಾವರಣ ನಿರ್ಮಾಣ ಮಾಡುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.