ಸರ್ಕಾರವು ಹೆಚ್.ಕೆ.ಆರ್.ಡಿ.ಬಿ.ಗೆ ಕಳೆದ ವರ್ಷದಿಂದ ಪ್ರತಿ ವರ್ಷ 1500 ಕೋಟಿ ರೂ.ಗಳ ಅನುದಾನ ಒದಗಿಸಲು ವಾಗ್ದಾನ ನೀಡಿದೆ. ಅದಕ್ಕನುಗುಣವಾಗಿ ಹೆಚ್.ಕೆ.ಆರ್.ಡಿ.ಬಿ.ಯಿಂದ ಕಾಮಗಾರಿಗಳನ್ನು ಕೈಗೊಳ್ಳಬೇಕೆಂದು ಕಲಬುರಗಿ ಲೋಕಸಭಾ ಸದಸ್ಯ ಡಾ. ಮಲ್ಲಿಕಾರ್ಜುನ ಖರ್ಗೆ ಸಲಹೆ ನೀಡಿದರು.
ಕಲಬುರಗಿಯ ನಾಗನಹಳ್ಳಿ ರಸ್ತೆಯಲ್ಲಿರುವ ಹನುಮಾನ ತಾಂಡಾದಲ್ಲಿ ಸಾರ್ವಜನಿಕ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಹೆಚ್.ಕೆ.ಆರ್.ಡಿ.ಬಿ. ಸಭೆ ನಡೆಯಲಿದ್ದು, ಸರ್ಕಾರ ನೀಡಿರುವ ವಾಗ್ದಾನದಂತೆ ಹೆಚ್.ಕೆ.ಆರ್.ಡಿ.ಬಿ.ಗೆ ಅನುದಾನ ಬಿಡುಗಡೆ ಮಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ, ಹಣಕಾಸು ಸಚಿವರಿಗೆ ಹಾಗೂ ಕಾರ್ಯದರ್ಶಿಗಳ ಮೇಲೆ ಒತ್ತಡ ತರಬೇಕು. ಹೆಚ್.ಕೆ.ಆರ್.ಡಿ.ಬಿ.ಯಿಂದ ಬೃಹತ್ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದರು.
ಸರ್ಕಾರ ಹೆಚ್.ಕೆ.ಆರ್.ಡಿ.ಬಿ.ಗೆ ಕಳೆದ ವರ್ಷ ಹಾಗೂ ಪ್ರಸಕ್ತ ವರ್ಷ ತಲಾ 1500 ಕೋಟಿ ರೂ. ಬಿಡುಗಡೆ ಮಾಡಲು ವಾಗ್ದಾನ ಮಾಡಿದೆ. ಆದರೆ ಕಳೆದ ವರ್ಷ 1000 ಕೋಟಿ ರೂ. ಹಾಗೂ ಪ್ರಸಕ್ತ ವರ್ಷ 1000 ಕೋಟಿ ರೂ. ಬಿಡುಗಡೆಗೆ ಆದೇಶಿಸಿದೆ. ಕಳೆದ ಮತ್ತು ಈ ವರ್ಷದ ಅನುದಾನದ 1000 ಕೋಟಿ ರೂ. ಕೊರತೆ ಅಲ್ಲದೇ ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆದಾಗ 400 ಕೋಟಿ ರೂ. ನೀಡುವುದಾಗಿ ಘೋಷಿಸಲಾಗಿತ್ತು. ಹೀಗೆ ಒಟ್ಟು 1400 ಕೋಟಿ ರೂ. ಗಳ ಅನುದಾನ ಈ ಭಾಗಕ್ಕೆ ಬರಬೇಕಾಗಿದೆ. ಈ ಅನುದಾನ ದೊರೆತಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲು ಅನುಕೂಲವಾಗುವುದು. ಈ ನಿಟ್ಟಿನಲ್ಲಿ ಈಗಾಗಲೇ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದರು.