ಸಮಾಜದ ದುರ್ಬಲ ವರ್ಗಗಳ ಸಮುದಾಯಕ್ಕೆ ಅನುಕೂಲವಾಗುವಂತೆ ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯಮಶೀಲತೆ, ಆರ್ಥಿಕ ಸಬಲತೆ ಮತ್ತು ಕೌಶಲ್ಯ ಅಭಿವೃದ್ಧಿಗಾಗಿ ಸಮಾಜ ಕಲ್ಯಾಣ ಇಲಾಖೆ ರಾಷ್ಟ್ರದಲ್ಲೇ ಪ್ರಪ್ರಥಮವಾಗಿ ರೂಪಿಸಲಾಗಿದೆ ‘ಉನ್ನತಿ’ ಯೋಜನೆ.
ಈ ಯೋಜನೆಯಡಿ ಆಯ್ಕೆಯಾಗಿರುವ ಉದ್ಯಮಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಹಾಗೂ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರೋತ್ಸಾಹಧನದ ಚೆಕ್ಕುಗಳನ್ನು ವಿತರಿಸಿದರು. 22 ವಿಶಿಷ್ಟ ನವೋದ್ಯಮಗಳಿಗೆ 4.7 ಕೋಟಿ ರೂ. ಪ್ರೋತ್ಸಾಹಧನವನ್ನು ನೀಡಿ ನವೋದ್ಯಮಗಳಿಗೆ ಶುಭ ಹಾರೈಸಿದರು.
‘ಉನ್ನತಿ’ ಯೋಜನೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಉದ್ಯಮಿಗಳಿಗೆ ನವೋದ್ಯಮಗಳನ್ನು ಸ್ಥಾಪಿಸಲು ಆರಂಭಿಕ ಅಗತ್ಯತೆಗಳನ್ನು ಪೂರೈಸುವ ಪರಿಕಲ್ಪನೆಯನ್ನು ಹೊಂದಿದ್ದು, ಆಯ್ಕೆಗೊಳ್ಳುವ ಉದ್ಯಮಿಗೆ ಗರಿಷ್ಠ 50 ಲಕ್ಷ ರೂ.ಗಳವರೆಗೆ ಆರ್ಥಿಕ ನೆರವು ನೀಡಲಾಗುತ್ತದೆ. ತಂತ್ರಜ್ಞಾನ ಕ್ಷೇತ್ರದಲ್ಲಿನ ನವೋದ್ಯಮಗಳನ್ನು ಆರಂಭಿಸಲು ಬಯಸುವವರಿಗೆ ಉದ್ಯಮಗಳ ಬಗ್ಗೆ ಮಾಹಿತಿ, ಉತ್ಪನ್ನಗಳ ಪ್ರಾಯೋಗಿಕ ಪರಿಶೀಲನೆ, ವಿಚಾರ ದೃಢೀಕರಣ, ಮೂಲ ಬಂಡವಾಳ ನೀಡಿಕೆ ಹಾಗೂ ಅಂತಿಮವಾಗಿ ಮಾರುಕಟ್ಟೆ ಪ್ರವೇಶವನ್ನು ಒದಗಿಸುವ ಮಹತ್ತರ ಆಶಯವನ್ನು ‘ಉನ್ನತಿ’ ಹೊಂದಿದೆ.