ಫೆ. 27 ರಂದು ನನ್ನ ಹುಟ್ಟುಹಬ್ಬವಿದೆ. ಆದರೆ ಸರಳವಾಗಿ ಜನ್ಮದಿನ ಆಚರಿಸಿಕೊಳ್ಳುತ್ತಿದ್ದು, ಯಾರೂ ಸಿಹಿ ಹಂಚಬಾರದು ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ತುಮಕೂರು ಸಿದ್ದಗಂಗಾ ಶ್ರೀಗಳು ನಮ್ಮನ್ನು ಅಗಲಿದ್ದು ಹಾಗೂ 40 ಯೋಧರು ಹುತಾತ್ಮರಾಗಿರುವ ಹಿನ್ನೆಲೆಯಲ್ಲಿ ನಾನು ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಳ್ಳುತ್ತಿದ್ದೇನೆ. ಚಿತ್ರದುರ್ಗದಲ್ಲಿ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದೇನೆ. ನನ್ನ ಹುಟ್ಟುಹಬ್ಬದ ದಿನದಂದು ಯಾರೂ ಸಿಹಿ ಹಂಚಬಾರದು ಎಂದು ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಏರ್ ಶೋ ಅಂತಾರಾಷ್ಟ್ರೀಯ ಕಾರ್ಯಕ್ರಮ, ಇಲ್ಲಿ ಯಾವುದೇ ಅವಘಡ ನಡೆಯದಂತೆ ನೋಡಿಕೊಳ್ಳುವುದು ರಾಜ್ಯ ಸರ್ಕಾರದ ಹೊಣೆ. ಆದರೆ ಕಾರುಗಳು ಸುಟ್ಟುಹೋಗಿರುವುದಕ್ಕೆ ಇದಕ್ಕಿಂತಲೂ ಹೆಚ್ಚಿನ ಅನಾಹುತ ನಡೆದಿದ್ದರೆ, ಅದಕ್ಕೆ ರಾಜ್ಯ ಸರ್ಕಾರವೇ ಹೊಣೆಹೊರಬೇಕಿತ್ತು. ಕಾರುಗಳು ಸುಟ್ಟುಹೋಗಿ ಒಂದು ಗಂಟೆಗಳ ನಂತರ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿದೆ ಎಂದು ದೂರಿದರು. ಕೇವಲ ಕಾರುಗಳು ಸುಟ್ಟುಹೋಗಿವೆ, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಸಮಾಧಾನದ ಮಾತನಾಡಿರುವ ಗೃಹ ಸಚಿವ ಎಂ.ಬಿ. ಪಾಟೀಲ್ ಅವರಿಗೆ ನೂರಾರು ಕಾರುಗಳು ಭಸ್ಮವಾಗಿದ್ದು, ರಾಷ್ಟ್ರೀಯ ನಷ್ಟ ಎಂದು ಅನ್ನಿಸಲಿಲ್ಲವೇ ಎಂದು ಪ್ರಶ್ನಿಸಿದರು.
ಬಿಜೆಪಿ ಈ ಪ್ರಕರಣವನ್ನು ರಾಜಕಾರಣದ ದೃಷ್ಟಿಯಿಂದ ನೋಡುತ್ತಿಲ್ಲ. ಈ ಘಟನೆಗೂ ಮುನ್ನ ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ ಸೂಕ್ತ ಕ್ರಮ ಕೈಗೊಳ್ಳಬೇಕಿತ್ತು. ಇದು ರಾಜ್ಯದ ಜವಾಬ್ದಾರಿ ಕೂಡ. ಅದು ಬಿಟ್ಟು ಕೇಂದ್ರ ಸರ್ಕಾರದ ಮೇಲೆ ಬೊಟ್ಟು ತೋರಿಸಬಾರದು ಎಂದರು.