ಬೆಂಗಳೂರು: ಕಾಂಗ್ರೆಸ್ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್ ಅಳಿಯ ಭವಾನಿ ಸಿಂಗ್ ವಿರುದ್ಧ ಕೇಳಿ ಬಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಾಬುರಾವ್ ಚೌಹಾಣ್ ಇಂದು ದಾಖಲೆ ಬಿಡುಗಡೆ ಮಾಡಿದ್ದಾರೆ.
ಪ್ರೆಸ್‌ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದಿಗ್ವಿಜಯ್ ಸಿಂಗ್ ಅಳಿಯ ಭವಾನಿ ಸಿಂಗ್ ರಾಜಸ್ತಾನದ ಜಯಪುರ ಮೂಲದವರು. ಬೆಂಗಳೂರಿನ ಜೆ.ಪಿ.ನಗರದ ಬಾಲಾಜಿ ಎಲೆಕ್ಟ್ರಿಕ್ಸ್ ಮಾಲೀಕ ಕೆ. ಚಂದ್ರಬಾಬುಗೆ ರಾಜ್ಯ ಸರ್ಕಾರ ವಿದ್ಯುತ್ ಗುತ್ತಿಗೆಯೊಂದನ್ನು ಟೆಂಡರ್ ಮುಖಾಂತರ ಕೊಡಿಸುವುದಾಗಿ ವಂಚಿಸಿ, 1.15 ಕೋಟಿ ರೂ. ಪಡೆದು ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಚೆಕ್ ಮೂಲಕ ಲಂಚದ ಹಣವನ್ನು ಮುಂಗಡ ಪಡೆಯಲಾಗಿತ್ತು. ದಿಗ್ವಿಜಯ್ ಸಿಂಗ್ ಕೂಡ ಚಂದ್ರಬಾಬುರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಆ ಸಂದರ್ಭ ಕೆಲಸ ಮಾಡಿಸಿಕೊಡುವುದಾಗಿ ಭರವಸೆ ನೀಡುತ್ತಾರೆ. ಹಣ ಪಡೆದಿದ್ದಕ್ಕೆ ಪ್ರತಿಯಾಗಿ ದಿಗ್ವಿಜಯ್ ಸಿಂಗ್ ಅಳಿಯ ಚೆಕ್ ನೀಡುತ್ತಾರೆ. ಕೆಲಸವಾಗದ ಕಾರಣ ಚೆಕ್ ಬೌನ್ಸ್ ಆಗಿದೆ.
ಕಾಂಗ್ರೆಸ್ ಸರ್ಕಾರದಲ್ಲಿ ಚೆಕ್ ಪಡೆದು ಸಿಕ್ಕಿಬೀಳುವ ಸಂಪ್ರದಾಯ ಹೊಸದೇನು ಅಲ್ಲ. ಇಂತಹ ಸಾಕಷ್ಟು ಕೆಲಸ ಮಾಡಿದ್ದಾರೆ. ಕೆಲಸವನ್ನೂ ಮಾಡಿ ಕೊಟ್ಟಿಲ್ಲ, ದುಡ್ಡೂ ವಾಪಸ್ ನೀಡಿಲ್ಲ. ಉಸ್ತುವಾರಿಯೂ ಹೋಯ್ತು, ಇತ್ತ ಮುಖವನ್ನೂ ಹಾಕಲಿಲ್ಲ. ಲಂಚ ತೆಗೆದುಕೊಳ್ಳುವುದು ಅದೂ ಚೆಕ್ ಮೂಲ ಪಡೆಯುವ ವಿಶಿಷ್ಟ ಪ್ರವೃತ್ತಿ ಕಾಂಗ್ರೆಸ್‌ನಲ್ಲಿ ಮಾತ್ರವಿದೆ. ಕಾಂಗ್ರೆಸ್ ನಾಯಕರ ಇಂತಹ ಭ್ರಷ್ಟಾಚಾರಕ್ಕೆ ಜನ 2018ರ ಚುನಾವಣೆಯಲ್ಲಿ ತಕ್ಕ ಉತ್ತರ ನೀಡುತ್ತಾರೆ ಎನ್ನುವ ವಿಶ್ವಾಸ ಇದೆ ಎಂದಿದ್ದಾರೆ.