ಬಿಬಿಎಂಪಿ ಹೊರತುಪಡಿಸಿ, ಡಿ.22ಕ್ಕೆ ಸಂಪೂರ್ಣ ಅಂದರೆ ಶೇ.100ರಷ್ಟು ಎರಡು ಡೋಸ್ ಲಸಿಕೆ ಪೂರೈಸಲಾಗಿದೆ. ಈ ಮೂಲಕ ಕೊರೊನಾ ಹೋರಾಟದಲ್ಲಿ ಬೆಂಗಳೂರು ನಗರ ಜಿಲ್ಲಾ ಮತ್ತೊಂದು ಸಾಧನೆ ಮಾಡಿದೆ ಎಂದು ಜಿಲ್ಲಾಕಾರಿ ಜೆ.ಮಂಜುನಾಥ್ ತಿಳಿಸಿದರು.
ಈ ಮೂಲಕ ಎರಡನೇ ಡೋಸ್ ಸಹ ಪೂರೈಸುವ ಮುಖಾಂತರ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದ ಜಿಲ್ಲಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು. ಕೋವಿಡ್ ವಾರಿಯರ್ಸ್‍ಗಳಿಗೆ ಜಿಲ್ಲಾಡಳಿತ ವತಿಯಿಂದ ಗೌರವ ಸಮರ್ಪಣೆ ಮತ್ತು ಕೋವಿಡ್ ಲಸಿಕೆ ಬಗ್ಗೆ ಮಾಹಿತಿ ನೀಡುತ್ತಾ ಮಾತನಾಡಿದ ಅವರು, ಲಸಿಕೆ ನೀಡುವುದು ನಿರಂತರವಾಗಿ ನಡೆಯುತ್ತಿರುತ್ತದೆ. ಬೆಂಗಳೂರು ನಗರ ಜಿಲ್ಲಾ ಮೊದಲನೇ ಡೋಸ್ ನೀಡುವಲ್ಲಿಯೂ ಶೇ.100ರಷ್ಟು ಗುರಿಯನ್ನು ಮುಟ್ಟುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದರು.
ಹಲವಾರು ಜಿಲ್ಲಾಗಳಲ್ಲಿ ಇನ್ನೂ ಒಂದನೇ ಡೋಸ್‍ಗೆ ನಿಗದಿ ಮಾಡಿದ್ದ ಗುರಿ ತಲುಪುವಲ್ಲಿ ಇರಬೇಕಾದರೆ ನಾವು ಎರಡನೇ ಡೋಸ್ ಪೂರೈಸಿದ್ದೇವೆ ಎಂದು ತಿಳಿಸುತ್ತಾ ಜನವರಿ 2020 ರಿಂದ ಪ್ರಾರಂಭವಾದ ಲಸಿಕಾ ಪ್ರಯಾಣದ ಕಿರು ಚಿತ್ರ ಪರಿಚಯಿಸಿದರು.ಕೊರೊನಾ ಸೋಂಕು ಭಾರತ ಸೇರಿದಂತೆ ಹಲವಾರು ದೇಶಗಳಲ್ಲಿನ ಜನರ ಪರಿಸ್ಥಿತಿಯನ್ನು ಹಿಂಡಿ ಹಿಪ್ಪೆ ಮಾಡಿದೆ. ಕೋವಿಡ್ ವಿರುದ್ಧ ಹೋರಾಡಲು ನಮಗಿರುವ ಒಂದೇ ಅಸ್ತ್ರ ಅಂದರೆ - ಲಸಿಕೆ. ಇದನ್ನು ಎಲ್ಲರೂ ತಪ್ಪದೆ ಪಡೆಯಬೇಕು ಎಂದರು.